ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸಣ್ಣ ಸಮುದಾಯಕ್ಕೆ ಹೆಚ್ಚು ಮನ್ನಣೆ- ಕಾಂಗ್ರೆಸ್ ದಳ ನೆಲದಲ್ಲಿ ಅರಳಿದ ಕಮಲ
ಚಿಕ್ಕಬಳ್ಳಾಪುರ ಜನವರಿ 26: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯದ ಮತದಾರರೇ ನಿರ್ಣಾಯಕರಾಗಿರುವ ಲೋಕಸಭಾ ಕ್ಷೇತ್ರದಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ವಿಜಯದ ಮಾಲೆ ದಕ್ಕಿದ್ದು ಕೇವಲ ಎರಡು ಬಾರಿ ಮಾತ್ರ. ಹೌದು ಮೊದಲಿನಿಂದಲೂ ಈ ಕ್ಷೇತ್ರದಿಂದ ಸಣ್ಣಪುಟ್ಟ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಗೆದ್ದಿದ್ದು ಮಾತ್ರ ಕೇವಲ ಎರಡು ಬಾರಿ ಮಾತ್ರ, ಉಳಿದಂತೆ ಇನ್ನಿತರೇ ಸಣ್ಣ ಸಮುದಾಯದ ಅಭ್ಯರ್ಥಿಗಳನ್ನು ಹೆಚ್ಚು ಸಲ ಬಾರಿ ಅಂತರದಿಂದ ಗೆಲ್ಲಿಸಿರುವುದೇ ಚಿಕ್ಕಬಳ್ಳಾಪುರ ಲೋಕ ಸಮರದ ಫಲಿತಾಂಶ ವೈಶಿಷ್ಟತೆ.

ಕ್ಷೇತ್ರದ ಇಂದಿನ ರಾಜಕೀಯ ಸನ್ನಿವೇಶ, ಲೆಕ್ಕಾಚಾರ ಬದಲಾಗಿದೆ. ಪ್ರಬಲ ಸಮುದಾಯದ ಅಭ್ಯರ್ಥಿಗಳೇ ಗೆಲ್ಲುವ ಕುದುರೆಗಳು ಎನ್ನುವ ಪರಿಸ್ಥಿತಿ ಇದೆ. ಸಣ್ಣ ಪುಟ್ಟ ಸಮುದಾಯಗಳ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಕ್ಷೀಣವಾಗುತ್ತಿದೆ.
ಆವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ 2008ರಲ್ಲಿ ಜಿಲ್ಲೆಯಾಗಿ ರೂಪಗೊಂಡಿತು. ಈ ಹಿಂದೆ ಮಧುಗಿರಿ, ಹೊಸಕೋಟೆ ಲೋಕಸಭಾ ಕ್ಷೇತ್ರದ ಭಾಗವಾಗಿದ್ದ ಚಿಕ್ಕಬಳ್ಳಾಪುರ 1977 ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು.
1977 ರಿಂದ 2024 ರ ಲೋಕಸಭಾ ಅವಧಿಯ ಅಂತ್ಯದ ತನಕ ಆಯ್ಕೆಯಾಗಿರುವ ಜನಪ್ರತಿನಿದಿಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಕೇವಲ ಇಬ್ಬರು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ.
ಯಾವ ಸಮುದಾಯಕ್ಕೆ ಲಕ್?
1977 ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಆಸ್ತಿತ್ವಕ್ಕೆ ಬಂದ ನಂತರ ಈಡಿಗ ಸಮುದಾಯದ ಅಭ್ಯರ್ಥಿಗಳಿಗೆ ನಾಲ್ಕು ಬಾರಿ ವಿಜಯಲಕ್ಷ್ಮಿ ಒಳಿದಿದ್ದರೆ, ಮೂರು ಬಾರಿ ಬ್ರಾಹ್ಮಣರು, ಎರಡು ಬಾರಿ ದೇವಾಡಿಗರು, ಒಮ್ಮೆ ವೈಶ್ಯ ಸಮುದಾಯದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
1977 ಹಾಗೂ 2019 ರ ಚುನಾವಣೆಯಲ್ಲಿ ಒಕ್ಕಲಿಗರಿಗೆ ಗೆಲುವು :
ಹೌದು 1977 ರಲ್ಲಿ ಲೋಕಸಭಾ ಕ್ಷೇತ್ರವಾಗಿ ಆಸ್ತಿತ್ವಕ್ಕೆ ಬಂದ ಮೊದಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದ ಎಂ.ವಿ. ಕೃಷ್ಣಪ್ಪ ಗೆಲುವು ದಾಖಲಿಸಿದರು. ತರುವಾಯ 2019 ರ ಲೋಕಸಭಾ ಚುನಾವಣೆಯ ತನಕ ಒಕ್ಕಲಿಗ ಸಮುದಾಯದಿಂದ ಸ್ಪರ್ಧಿಸಿದ್ದರು ಸಹ ಒಕ್ಕಲಿಗ ಸಮುದಾಯಕ್ಕೆ ಅಭ್ಯರ್ಥಿಗಳಿಗೆ ಗೆಲುವು ದಕ್ಕಿರಲಿಲ್ಲ. 2019ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಬಿ.ಎನ್. ಬಚ್ಚೇಗೌಡ ಗೆಲ್ಲುವ ಮೂಲಕ ಹಲವು ಹೊಸ ದಾಖಲೆ ಸೃಷ್ಟಿಸಿದರು.

ಸಮುದಾಯಗಳ ಬಲಾ ಬಲ ಎಷ್ಟು?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಲಿಜ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಅಂದಾಜು 4.50 ಲಕ್ಷ, ಪರಿತಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 5 ಲಕ್ಷ ಮತ್ತು ಬಲಿಜ ಸಮುದಾಯದ 1.80 ಲಕ್ಷ ಮತಗಳು ಇವೆ. ಈ ಬಾರಿ ಪ್ರಬಲ ಸಮುದಾಯಗಳ ಒಗ್ಗಟ್ಟು, ಅಹಿಂದ ಮತಗಳ ಧ್ರುವೀಕರಣ ಹೀಗೆ ನಾನಾ ವಿಚಾರಗಳು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.
ಗೆಲುವು ಕಂಡವರು ಯಾರ್ಯಾರು?
ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ಕೃಷ್ಣಪ್ಪ ಗೆಲುವು ದಾಖಲಿಸಿದರು. ನಂತರ 1980ರ ಚುನಾವಣೆಯಲ್ಲಿ ವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನ ಕುಮಾರ್, 1984ರಿಂದ 1991ರವರೆಗೂ ಬ್ರಾಹ್ಮಣ ಸಮುದಾಯದ ವಿ. ಕೃಷ್ಣರಾವ್, 1996ರಿಂದ 2004ರವರೆಗೆ ಈಡಿಗ ಸಮುದಾಯದ ಆರ್.ಎಲ್.ಜಾಲಪ್ಪ, 2009 ಮತ್ತು 2014ರಲ್ಲಿ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯಿಲಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.
ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದ ಬಚ್ಚೇಗೌಡ:-
ಹೌದು 2019ರ ಲೋಕಸಭೆ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರ ಗೆಲುವು ನಾನಾ ರೀತಿಯ ಬೆಳವಣಿಗೆಗೆ ಕಾರಣವಾಯಿತು. ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿತು. ಇಲ್ಲಿಯವರೆಗೂ ಕಾಂಗ್ರೆಸ್- ಜನತಾದಳ ಹೊರತುಪಡಿಸಿದರೆ ಮೂರನೇ ಪಕ್ಷ ಇಲ್ಲಿ ಗೆದ್ದಿರಲಿಲ್ಲ. 1980ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ದಾಖಲೆ ವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನಕುಮಾರ್ ಹೆಸರಿನಲ್ಲಿ ಇತ್ತು. ಅವರು 408214 ಮತ ಪಡೆದಿದ್ದರು.
2019ರ ಚುನಾವಣೆಯಲ್ಲಿ ಬಚ್ಚೇಗೌಡರು 745912 ಮತ ಪಡೆದು ಪ್ರತಿಸ್ಪರ್ಧಿ ವಿರುದ್ಧ 182110 ಮತಗಳಿಂದ ಗೆಲುವು ದಾಖಲಿಸಿದರು. ಒಕ್ಕಲಿಗರ ಬಹುಸಂಖ್ಯೆಯ ಮತಗಳು ಒಂದೇ ತೆಕ್ಕೆಗೆ ಜಾರಿದ್ದು ಬಚ್ಚೇಗೌಡರು ಈ ಪ್ರಮಾಣದಲ್ಲಿ ಮತ ಗಳಿಸಲು ಕಾರಣ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ಅಂತರಾಳ ಬಲ್ಲವರು. ಹಲವು ದಶಕಗಳ ನಂತರ ಮತ್ತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ 'ಗೌಡ'ರ ಕೈವಶವಾಗಿದೆ. ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳಬೇಕು ಎನ್ನುವ ಪ್ರತಿಷ್ಠೆ ಸಹ ಒಕ್ಕಲಿಗ ಸಮುದಾಯದಲ್ಲಿದೆ. ಮತ್ತೊಂದು ಕಡೆ 'ಅಹಿಂದ' ಸಮುದಾಯಗಳು ಸಹ ರಾಜಕೀಯವಾಗಿ ಜಾಗೃತವಾಗಿವೆ.
ರಾಜಕೀಯ ನಿವೃತ್ತಿ ಪಡೆದ ಬಿ. ಎನ್.ಬಚ್ಚೆಗೌಡ :-
2019ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಸದಸ್ಯ 2024ರ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವು ಸಿಕ್ಕ ಕೂಡಲೇ, ರಾಜಕೀಯ ನಿವೃತ್ತಿ ಪಡೆದು, ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರ ಉಳಿದಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ವದಂತಿ ಸಹ ಕ್ಷೇತ್ರದಲ್ಲಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.












Click it and Unblock the Notifications