ಡಾ.ಕೆ.ಸುಧಾಕರ್ ಅವರಿಗೆ 1 ಲಕ್ಷ ಮತಗಳ ಲೀಡ್ ಕೊಡಿಸುವೆ: ಶಾಸಕ ವಿಶ್ವನಾಥ್ ಪ್ರತಿಜ್ಞೆ!
ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರವನ್ನು ಮುಂದುವರಿಸಿದ್ದಾರೆ. ಇದೇ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸಭೆಗಳನ್ನ ಆಯೋಜಿಸುತ್ತಾ, ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೂಡ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ ಡಾ. ಕೆ. ಸುಧಾಕರ್ ಅವರು.
ಪ್ರಚಾರದ ವೇಳೆ ಮಾತನಾಡಿದ ಡಾ.ಕೆ. ಸುಧಾಕರ್, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ & ಜೆಡಿಎಸ್ ಒಂದಾದ ಬಳಿಕ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಉಂಟಾಗಿದೆ ಎಂದರು. ಯಲಹಂಕ ವಿಧಾನಸಭೆ ಕ್ಷೇತ್ರದ ತೋಟದಗುಡ್ಡ ಹಳ್ಳಿ, ಅಂಚೇಪಾಳ್ಯ ಮೊದಲಾದ ಕಡೆ ಶಾಸಕ ಎಸ್.ಆರ್.ವಿಶ್ವನಾಥ್ ಅವರೊಂದಿಗೆ ಡಾ.ಕೆ.ಸುಧಾಕರ್ ಪ್ರಚಾರ & ಸಭೆಗಳನ್ನು ನಡೆಸಿದರು. ಇದೇ ವೇಳೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್ ಅವರು, 2019 ರಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜಿಪಿಗೆ 45,000 ಮತಗಳ ಲೀಡ್ ಸಿಕ್ಕಿತ್ತು. ಈ ಬಾರಿ ಎನ್‌ಡಿಎಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಪ್ರಧಾನಿ ಮೋದಿ ಗ್ಯಾರಂಟಿ!
ಕಾಂಗ್ರೆಸ್ ಸರ್ಕಾರ ಬೆರಳೆಣಿಕೆಯಷ್ಟು ನಿರುದ್ಯೋಗಿ ಯುವಜನರಿಗೆ ಮಾತ್ರ ಷರತ್ತು ಹಾಕಿ, ಹಣ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಉದ್ಯೋಗಾವಕಾಶ ನೀಡಿ ಬದುಕು ಕಟ್ಟಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆಯಡಿ ಎಲ್ಲ ನಿರುದ್ಯೋಗಿಗಳಿಗೆ ಹಣ ನೀಡುವುದಾಗಿ ತಿಳಿಸಿತ್ತು. ಆದರೆ ನಂತರ ಬಹಳ ತಡವಾಗಿ ಯೋಜನೆ ಜಾರಿ ಮಾಡಿ ಅನೇಕ ಷರತ್ತು ಹಾಕಿ ಎಲ್ಲ ಯುವಕರಿಗೆ ಅದರ ಪ್ರಯೋಜನ ಸಿಗದಂತೆ ಮಾಡಿದೆ. ಆದರೆ ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ನೀಡಿದ್ದಾರೆ, ಇದೇ ಮೋದಿ ಗ್ಯಾರಂಟಿ ಎಂದು ಡಾ. ಕೆ. ಸುಧಾಕರ್ ತಿಳಿಸಿದರು.
5,000 ಹೊಸ ಐಟಿಐ ಸಂಸ್ಥೆ ಸ್ಥಾಪನೆ
9 ವರ್ಷದಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ 5,000 ಹೊಸ ಐಟಿಐ ಸಂಸ್ಥೆಗಳನ್ನು ನಿರ್ಮಿಸಿದೆ. 4 ಲಕ್ಷಕ್ಕೂ ಹೆಚ್ಚು ಹೊಸ ಐಟಿಐ ಸೀಟು ಸೃಷ್ಟಿಸಲಾಗಿದೆ. ಹೀಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ 6ನೇ ತರಗತಿಯಿಂದಲೇ ಕೌಶಲ್ಯ ತರಬೇತಿಯನ್ನ ನೀಡಲಾಗುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನೀತಿ ಜಾರಿಗೆ ಅವಕಾಶ ನೀಡುತ್ತಿಲ್ಲ. 2014ಕ್ಕೆ ಹೋಲಿಸಿದರೆ 8 ರಷ್ಟಿದ್ದ ಏಮ್ಸ್‌ಗಳು 23ಕ್ಕೆ ಏರಿಕೆ ಆಗಿದೆ. 7 ಐಐಟಿ, 8 ಐಐಎಂ ಮತ್ತು 350 ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಿದೆ ಎಂದು ವಿವರಿಸಿದರು ಡಾ. ಕೆ. ಸುಧಾಕರ್ ಅವರು.

ಬೆಂಗಳೂರಿಗೆ ಪರ್ಯಾಯವಾಗಿ ಹೊಸ...
ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮೊದಲಾದ ಸ್ಥಳವನ್ನ ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಉಪನಗರಗಳಾಗಿ ಬೆಳೆಸಲಾಗುವುದು. ಈ ಭಾಗಗಳಲ್ಲೂ ಹೊಸ ಉದ್ಯಮಗಳ ಸ್ಥಾಪನೆಯನ್ನ ಮಾಡಿ ಹೆಚ್ಚು ಉದ್ಯೋಗವಾಕಾಶ ಕಲ್ಪಿಸಲಾಗುವುದು. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಆಗಿ ಈ ಭಾಗಗಳ ಯುವಜನರಿಗೆ ಸ್ಥಳೀಯವಾಗಿಯೆ ಉದ್ಯೋಗ ಮಾಡಲು ಅವಕಾಶ ದೊರೆಯಲಿದೆ ಎಂದು ತಿಳಿಸಿದರು ಡಾ. ಕೆ. ಸುಧಾಕರ್.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಹೊಸ ಕೈಗಾರಿಕೆ ಹಾಗೂ ಉದ್ಯಮಗಳನ್ನ ಆರಂಭಿಸುವ ಮೂಲಕ ಯುವ ಜನರಿಗೆ ಹೆಚ್ಚು ಉದ್ಯೋಗ ಕಲ್ಪಿಸಲು ಸಾಧ್ಯ ಇದ್ದು. ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ತಂದು ಉದ್ಯಮ ಸ್ಥಾಪಿಸಿ, ಉದ್ಯೋಗವಾಕಾಶ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು.












Click it and Unblock the Notifications