ಧಾರಾಕಾರ ಮಳೆಗೆ ಕೊಚ್ಚಿಹೋದ ಕುಶಾವತಿ ರಸ್ತೆ: ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಡಿತ!
ಚಿಕ್ಕಬಳ್ಳಾಪುರ ಅಕ್ಟೋಬರ್ 23: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್, ಆವುಲಬೆಟ್ಟ ಸೇರಿದಂತೆ ಸುತ್ತ ಮುತ್ತಲಿನ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಕುಶಾವತಿ ನದಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ನದಿ ನೀರು ಹರಿದು ಹೋಗುವ ನವಿಲಗುರ್ಕಿ ಬಳಿಯ ದೊಡ್ಡ ಏಟಿ ಬಳಿ ಇರುವ ಮುಖ್ಯ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ.
ಚಿಕ್ಕಬಳ್ಳಾಪುರದಿಂದ ಮಂಡಿಕಲ್ ಮೂಲಕ ಕಮ್ಮಾಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು ಹಾಗೂ ಗುಡಿಬಂಡೆ ತಾಲೂಕಿನ ಹಲವು ಹಳ್ಳಿಗಳ ಮೂಲಕ ಹಾದು ಹೋಗಿ ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕುಶಾವತಿ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳ ಸಂಪರ್ಕ ಕಡಿತಗೊಂಡಿದ್ದು, 4 ಕಿ. ಮೀ ವ್ಯಾಪ್ತಿಯೋಳಗಿನ ಗ್ರಾಮಗಳಿಗೆ ಹೋಗಬೇಕಾದವರು 20 ಕಿ.ಮೀ ಸುತ್ತಿ ಬರಬೇಕಾದ ಪರಿಸ್ಥಿತಿ ಇದೆ.

ಗ್ರಾನೈಟ್ ಲಾರಿಗಳಿಂದ ಮೋರಿ ಕುಸಿತ?
ದಶಕಗಳಿಂದಲೂ ಕುಶಾವತಿ ನದಿಯ ನೀರು ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದೆ. ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ದ್ವಿಚಕ್ರ, ಬಸ್, ಗೂಡ್ಸ್ ವಾಹನಗಳು ಸಂಚರಿಸುತ್ತಿದ್ದರು ಕುಸಿಯದ ಮೋರಿ, ಒಂದು ಮಳೆಗೆ ಹೇಗೆ ಕುಸಿಯಲು ಸಾಧ್ಯ? ಈ ಭಾಗದಲ್ಲಿನ ಗ್ರಾನೈಟ್ ತೆಗೆಯುವ ಕ್ವಾರಿಗಳಿಂದ ಮಿತಿ ಮೀರಿದ ಬಾರವನ್ನು ಹೊತ್ತು ಸಾಗುವ ಗಾಣಿಗರಿಕೆಯ ಲಾರಿಗಳು ಈ ಭಾಗದಲ್ಲಿ ಸಂಚರಿಸುವುದರಿಂದ ಮೋರಿ ಕುಸಿದು ಬಿದ್ದಿದೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಕನಸಾಗಿಯೇ ಉಳಿದ ಸೇತುವೆ ನಿರ್ಮಾಣ -
ಕುಶಾವದಿ ನದಿಗೆ ಅಡ್ಡಲಾಗಿ ಶಾಶ್ವತ ಪರಿಹಾರಕ್ಕಾಗಿ ಮೇಲು ಸೇತುವೆ ನಿರ್ಮಿಸಬೇಕೆಂಬ ದಶಕಗಳ ಬೇಡಿಕೆಗೆ ಸ್ಥಳೀಯ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಕನಸಾಗಿಯೆ ಉಳಿದಿದೆ ಎಂಬ ಆರೋಪವು ಕೇಳಿ ಬಂದಿದೆ.
ರಸ್ತೆಯ ಮೇಲೆ ಕುಶಾವತಿ ನದಿಯ ನೀರು ಹರಿಯುತ್ತಿದೆ, ಆದರೆ ಸೇತುವೆ ನಿರ್ಮಾಣವು ಇಲ್ಲ , ಕನಿಷ್ಠ ಪಕ್ಷ ರಸ್ತೆಯ ಎರಡೂ ಬದಿ ತಡೆಗೋಡೆ ನಿರ್ಮಾಣಕ್ಕೆ ಸ್ಥಳಿಯ ಜನಪ್ರತಿನಿದಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮನಸ್ಸಿಲ್ಲದ ಕಾರಣ ಮಳೆಗಾಲದಲ್ಲಿ ಇಲ್ಲಿನ ಸಾರ್ವಜನಿಕರು, ಶಾಲಾ ಕಾಲೇಜುಗಳ ಮಕ್ಕಳು, ಪ್ರಯಾಣಿಕರು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಪರದಾಡುವಂತೆ ಆಗಿದೆ.

ಸ್ಥಳೀಯ ಶಾಸಕರು 3 ಕೋಟಿ ವೆಚ್ಚದಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವುದಾಗಿ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದರು, ಆದರೆ ಅದು ಯಾವಾಗ ನಿರ್ಮಾಣ ಮಾಡುತ್ತಾರೋ ಗೊತ್ತಿಲ್ಲ?, ಸ್ಥಳೀಯ ಶಾಸಕರು ಸ್ಥಳಕ್ಕೆ ಬಂದು ಇಲ್ಲಿನ ಸಮಸ್ಯೆಯನ್ನು ಕಣ್ಣಾರೆ ನೋಡಿ, ಸಂಚಾರಕ್ಕೆ ವ್ಯವಸ್ಥೆ ಮಾಡಲಿ, ಲೋಕೋಪಯೋಗಿ ಅಧಿಕಾರಿಗಳು ಎಸಿ ಕೊಣೆಗಳಿಂದ ಹೊರಬಂದು, ಇಂತಹ ಸಮಸ್ಯೆಗಳ ನಿವಾರಣೆಗೆ ಮುಂದಾಗ ಬೇಕಿದೆ ಎಂದು ಸ್ಥಳೀಯ ನವಿಲಗುರ್ಕಿ, ಜೀಗಾನಹಳ್ಳಿ, ರಾಮಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹಾಗೂ ಸ್ಥಳಿಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications