ಮಾ.4ರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಇಲ್ಲಿದೆ ಕಾರ್ಯಕ್ರಮಗಳ ವಿವರ
ಮಾರ್ಚ್ 4 ಮತ್ತು 5 ರಂದು ಎರಡು ದಿನಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 2: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ 4 ಮತ್ತು 5 ರಂದು ಎರಡು ದಿನಗಳ ಕಾಲ, ನಗರ ನಂದಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹಬ್ಬದ ರೀತಿ ಆಚರಿಸಲು ಸಿದ್ಧತೆ ಕೈಗೊಂಡಿದ್ದು, ಸಾಹಿತ್ಯಾಭಿಮಾನಿಗಳು ಎರಡೂ ದಿನ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಮಾರ್ಚ್ 4ರಂದು ಬೆಳಿಗ್ಗೆ 8ಗಂಟೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ರಾಷ್ಟ ಧ್ವಜಾರೋಹಣ, ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ ನಾಡ ಧ್ವಜಾರೋಹಣ, ಪರಿಷತ್‌ನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಾರಂಭಿಸಲಿದ್ದಾರೆ.
ಬೆಳಿಗ್ಗೆ 6:30ಕ್ಕೆ ಸಮ್ಮೇಳನಾಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಅವರ ಮೆರವಣಿಗೆ ನಗರದ ಎಂ.ಜಿ. ರಸ್ತೆಯಿಂದ ಪ್ರಾರಂಭವಾಗಿ, ಜಿಲ್ಲಾ ಗ್ರಂಥಾಲಯ, ಶಿಡ್ಲಘಟ್ಟ ವೃತ್ತದ ಮೂಲಕ ನಂದಿ ರಂಗಮಂದಿರದ ಬಳಿ ಕೊನೆಕೊಳ್ಳಿದೆ. ಎಸ್‌ಪಿ ಡಿ.ಎಲ್.ನಾಗೇಶ್ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಡಿವೈಎಸ್‌ಪಿ ವಿ.ಕೆ.ವಾಸುದೇವ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮುನಿರಾಜು, ಪ್ರಾಧ್ಯಾಪಕ ಡಾ.ಚಂದ್ರಯ್ಯ ಭಾಗವಹಿಸಲಿದ್ದು, ವಿವಿಧ ಕಲಾತಂಡಗಳು ಮೆರಣಿಗೆ ಸಾಥ್ ನೀಡಲಿವೆ ಎಂದು ಪ್ರೊ.ಕೋಡಿರಂಗಪ್ಪ ತಿಳಿಸಿದರು.

ಬೆಳಗ್ಗೆ 11ಕ್ಕೆ ನಡೆಯಲಿರುವ ಸಾಹಿತ್ಯ ಸಮ್ಮೇಳ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಉದ್ಘಾಟಿಸಲಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆವಹಿಸಲಿದ್ದಾರೆ. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅಧ್ಯಯನ ಮಾರ್ಗದರ್ಶಿ ಬಿಡುಗಡೆ ಮಾಡಲಿದ್ದು,, ನಾಡೋಜ ಡಾ.ಹಂಪನಾಗರಾಯ್ಯ, ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ, ಸಮ್ಮೇಳನಾಧ್ಯಕ್ಷ ನಾಡೋಜ ಎಸ್.ಷಡಕ್ಷರಿ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 2ಗಂಟೆಗೆ ಅನ್ನದಾರ ಸ್ಮರಣೆ ಕುರಿತು ಗೋಷ್ಠಿ ನಡೆಯಲಿದ್ದು, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಎನ್.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ರೈತ ಸಂಘದ ಉಪಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಆಶಯ ನುಡಿ ಹೇಳಲಿದ್ದು, ರೇಷ್ಮೆ ಕೃಷಿ ಹಿತ ರಕ್ಷಣಾ ವೇದಿಕೆ ಸಂಚಾಲ ಶಿವಣ್ಣ ಅನ್ನದಾತರಿಗೆ ಗೌರವ ನುಡಿ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:305ಗಂಟೆಗೆ ಕವಿ ಗೋಷ್ಠಿ ನಡೆಯಲಿದ್ದು, ಸಾಹಿತಿ ಗೋಪಾಲಗೌಡ ಆಶಯನುಡಿ, ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ನಾಡು-ನುಡಿ ನೃತ್ಯರೂಪಕಗಳು, ಸಂಜೆ 7:30ಕ್ಕೆ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ ನಡೆಲಿಯದೆ.
ಸಮ್ಮೇಳನದ 2ನೇ ದಿನ ಮಾ.5ರಂದು ಬೆಳಿಗ್ಗೆ 9:30ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಅನುಭಾವಿಗಳು, ಕವಿಗಳ ಮತ್ತು ಭಾರತರತ್ನರ ಪರಿಚಯ, ೧೧ಕ್ಕೆ ಓದುವ ಸಮಾಜ ನಿರ್ಮಾಣದತ್ತ, ಮಾಧ್ಯಹ್ನ 12:30ಕ್ಕೆ ಸಾಹಿತ್ಯ ಮತ್ತು ಮಹಿಳಾ ಸಬಲೀಕರಣ ವಿಚಾರ ಕುರಿತು ಗೋಷ್ಠಿ, ಮಧ್ಯಾಹ್ನ 2:30ಕ್ಕೆ ಸಾಂಸ್ಕೃತಿಕ ಮತ್ತು ಕನ್ನಡ ಗೀತೆಗಳ ಗಾಯನ ಮತ್ತು ಸಂಜೆ 3:30ಕ್ಕೆ ಬಹಿರಂಗ ಅಧಿವೇಶನ, ನಿರ್ಣಯ ಮಂಡನೆ ನಡೆಯಲಿದೆ ಎಂದು ಹೇಳಿದರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧಿಪತಿ ಶ್ರೀ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ , ಸಮ್ಮೇಳನಾಧ್ಯಕ್ಷ ನಾಡೋಜ ಎಸ್.ಷಡಕ್ಷರಿ, ಸಂಸದ ಬಿ.ಎನ್.ಬಚ್ಚೇಗೌಡ, ಮಾಜಿ ಸಂಸದ ವೀರಪ್ಪ ಮೊಯ್ಲಿ , ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications