ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗ
ಚಿಕ್ಕಬಳ್ಳಾಪುರ, ನವೆಂಬರ್ 18: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಸುಧಾಕರ್ ಅವರ ಆಡಿಯೋ ಸಂದೇಶವೊಂದು ಬಹಿರಂಗಗೊಂಡಿದ್ದು, ಅಭ್ಯರ್ಥಿಗಳು ಚುನಾವಣೆ ಗೆಲ್ಲಲು ಯಾವ ರೀತಿಯ ಆಮಿಷಗಳನ್ನು ಒಡ್ಡುತ್ತಾರೆ, ಹೇಗೆ ಸುಳ್ಳು ಹೇಳುತ್ತಾರೆ, ಮೋಸ ಮಾಡುತ್ತಾರೆಂಬುದಕ್ಕೆ ಈ ಆಡಿಯೋವನ್ನು ಉದಾಹರಣೆಯಾಗಿ ನೀಡಬಹುದಾಗಿದೆ.
ಸುಧಾಕರ್ ಅವರು ತಮ್ಮದೇ ಆದ ಟ್ರಸ್ಟ್ ನ ಸದಸ್ಯರೊಬ್ಬರಿಗೆ ಕಳುಹಿಸಿರುವ ಆಡಿಯೋ ಸಂದೇಶ ಇದಾಗಿದ್ದು, ಸಂದೇಶದಲ್ಲಿ, 'ದೊಡ್ಡ ಉಡುಗೊರೆ ನೀಡುತ್ತೇವೆಂದು ಹೇಳಿ ಜನರ ವಿಳಾಸಗಳನ್ನು ಪಡೆಯಿರಿ' ಎಂದು ಸುಧಾಕರ್ ಸಿಬ್ಬಂದಿಗೆ ಸೂಚಿಸಿದ್ದಾರೆ.
ಟ್ರಸ್ಟ್‌ನ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು ಜನರಿಗೆ ಉಡುಗೊರೆಗಳನ್ನು ನೀಡುವುದಾಗಿ ಹೇಳಿ, ಬಿಲ್ ಮಾಡಿಸಲು ವಿಳಾಸದ ಅವಶ್ಯಕತೆ ಇದೆ ಎಂದು ಹೇಳಿ ವಿಳಾಸಗಳನ್ನು ಪಡೆಯಬೇಕು, ನಾಮಪತ್ರ ಸಲ್ಲಿಸುವ ಎರಡು ದಿನ ಮುಂಚಿತವಾಗಿ ಈ ಕೆಲಸ ಮಾಡಬೇಕು ಎಂದು ಸುಧಾಕರ್ ಆಡಿಯೋದಲ್ಲಿ ಹೇಳಿದ್ದಾರೆ.

ಸುಧಾಕರ್ ಅವರು ಸಾಯಿಕೃಷ್ಟ ಚಾರಿಟೇಬಲ್ ಟ್ರಸ್ಟ್ ಹೆಸರಿನ ಟ್ರಸ್ಟ್ ಒಂದನ್ನು ನಡೆಸುತ್ತಿದ್ದು, ಈ ಟ್ರಸ್ಟ್ ನ ಸದಸ್ಯರು ಮತ್ತು ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ, ಮತದಾರರಿಗೆ ಹಣ, ಉಡುಗೊರೆಯ ಆಮಿಷ ಒಡ್ಡಲು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಆಡಿಯೋ ನಿಂದ ಬಹಿರಂಗವಾಗಿದೆ.
ಆಡಿಯೋ ದಲ್ಲಿ ಮುಂದುವರೆದು ಮಾತನಾಡಿರುವ ಸುಧಾಕರ್, 'ಚುನಾವಣೆ ಮುಗಿದ ಕೂಡಲೇ ನಿಮಗೆಲ್ಲಾ ಪ್ರವಾಸದ ಆಯೋಜನೆ ಮಾಡುತ್ತೇನೆ, ಅಷ್ಟೆ ಅಲ್ಲದೆ ಒಂದು ತಿಂಗಳ ಸಂಬಳ ಹೆಚ್ಚುವರಿಯಾಗಿ ಕೊಡುತ್ತೇನೆ, ಪ್ರತಿಯೊಬ್ಬರು ಚುನಾವಣೆ ಮುಗಿಯುವವರೆಗೂ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿ' ಎಂದು ಸುಧಾಕರ್ ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಸುಧಾಕರ್, ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿಯಿಂದ ಉಪಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಸುಧಾಕರ್ ಗೆ ಎದುರಾಗಿ ಕಾಂಗ್ರೆಸ್‌ನ ಆಂಜಿನಪ್ಪ ಮತ್ತು ಜೆಡಿಎಸ್‌ನಿಂದ ಕೆ.ಪಿ.ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ.












Click it and Unblock the Notifications