ಚಿಕ್ಕಬಳ್ಳಾಪುರದಲ್ಲಿ ನಡೆದದ್ದು ಬಿಜೆಪಿಗರ ಉತ್ಸವ: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆಕ್ರೋಶ
ಚಿಕ್ಕಬಳ್ಳಾಪುರ, ಜನವರಿ, 11: ಚಿಕ್ಕಬಳ್ಳಾಪುರ ಉತ್ಸವವೂ ಮುಂಬರುವ ವಿಧಾನಸಭೆ ಚುನಾವಣಾ ದೃಷ್ಟಿಯಿಂದ ನಡೆಯುತ್ತಿರುವ ಬಿಜೆಪಿಗರ ಉತ್ಸವವಾಗಿದೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರೋಪಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ಸವದ ನೆಪವೊಡ್ಡಿ ಅಧಿಕಾರಿಗಳು ಕಚೇರಿಗಳಿಗೆ ಬರುತ್ತಿಲ್ಲ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಲ್ಲದೆ ರಸ್ತೆಗಳಲ್ಲಿಯೇ ಟೆಂಟ್ ಹಾಕಿರುವುದು ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾ ಕೇಂದ್ರ ಒಳಗೊಂಡಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಲವೆಡೆ ಬೀದಿ ದೀಪಗಳು ಇಲ್ಲದ ಕಾರಣ ಜನರು ಕತ್ತಲಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಚರಂಡಿಗಳಲ್ಲಿ ಕೊಳಚೆ ನೀರು ಗೊಬ್ಬುನಾರುತ್ತಿದೆ. ಅತಿವೃಷ್ಟಿ, ಮಹಾಮಾರಿ ಕೋವಿಡ್‍ನ ಪರಿಹಾರ ಕೈಸೇರದೆ ಜನರು ಪರದಾಡುತ್ತಿದ್ದ ವೇಳೆ ಸಮಸ್ಯೆಗಳನ್ನು ಬಗೆಹರಿಸುವ ಬದಲು ಉತ್ಸವಗಳ ಹೆಸರಿನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಹಣ ದುರ್ಬಳಕೆ, ಆರೋಪ
ಉತ್ಸವದಲ್ಲಿ ಜಿಲ್ಲೆಯ ಇಬ್ಬರು ಭಾರತರತ್ನ ಪಡೆದವರು ಹಾಗೂ ಇನ್ನಿತರೆ ಮಹನೀಯರನ್ನು, ಸ್ಥಳೀಯ ಕಲಾವಿದರನ್ನು, ಜಿಲ್ಲೆಯಾಗಲು ಕಾರಣರಾದವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಉತ್ಸವದ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿಯಾಗಿ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದಿನ ಚುನಾವಣೆಯಲ್ಲಿ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿಗೆ ಜೆಡಿಎಸ್‍ನಿಂದ ನಡೆದ ರಥಯಾತ್ರೆಗೆ ವ್ಯಾಪಕ ಜನಬೆಂಬಲವೇ ಸಾಕ್ಷಿಯಾಗಿದೆ. ಇದರಿಂದ ಕಂಗೆಟ್ಟ ಡಾ.ಕೆ.ಸುಧಾಕರ್ ಉತ್ಸವದ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ನಾವು ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ಕಾರ್ಯಗಳು ಹಾಗೂ ಜೆಡಿಎಸ್‍ನ ಮುಂದಿನ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್, ಬಾಲಕುಂಟಹಳ್ಳಿ ಮುನಿಯಪ್ಪ, ಕೆ.ಆರ್.ರೆಡ್ಡಿ, ಸಾಧಿಕ್ ಸೇರಿದಂತೆ ಮತ್ತಿತರರು ಇದ್ದರು.

ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ
ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಹಣ ನೀಡದೇ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ರೈತರಿಗೆ ಸಾಗುವಳಿ ಚೀಟಿ ನೀಡುವ ಬದಲಿಗೆ, ಅವರನ್ನು ಒಕ್ಕಲೆಬ್ಬಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗುತ್ತಿವೆ. ಕಳೆದ 10 ವರ್ಷಗಳಿಂದ ನಿವೇಶನದ ನೀಡುವ ಕುರಿತು ಚಕಾರ ಎತ್ತದವರು ಚುನಾವಣೆ ಸಮೀಪಿಸುತ್ತಿದ್ದಂತೆ ಜಮೀನನ್ನು ಗುರುತಿಸದೇ 20 ಸಾವಿರ ಜನರಿಗೆ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಇದು ವಿಪರ್ಯಾಸವಾಗಿದೆ ಎಂದು ಮಾಜಿ ಶಾಸಕ ಬಚ್ಚೇಗೌಡ ಲೇವಡಿ ಮಾಡಿದರು.












Click it and Unblock the Notifications