ಆವಲಗುರ್ಕಿ: ಆದಿಯೋಗಿ ಪ್ರತಿಮೆ ನಿರ್ಮಾಣ ಯೋಜನೆಗೆ ಕರ್ನಾಟಕ ಸರ್ಕಾರದಿಂದ ನೆರವು ಪಡೆದಿಲ್ಲ: ಇಶಾ ಪೌಂಡೇಶನ್
ಚಿಕ್ಕಬಳ್ಳಾಪುರಲ್ಲಿನ ಆದಿಯೋಗಿ ಮೂರ್ತಿ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ನೆರವು ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಇದಕ್ಕೆ ಇಶಾ ಪೌಂಡೇಶನ್, ಯಾವುದೇ ಸರ್ಕಾರದಿಂದಲೂ ಹಣದ ನೆರವನ್ನು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಚಿಕ್ಕಬಳ್ಳಾಪುರ, ಫೆಬ್ರವರಿ, 07: ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಗುರ್ಕಿ ಬಳಿ ಇತ್ತೀಚೆಗಷ್ಟೇ ಆದಿಯೋಗಿ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗಿತ್ತು. ಈ ಮೂರ್ತಿ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ನೆರವು ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಇದಕ್ಕೆ ಇಶಾ ಪೌಂಡೇಶನ್ ತೆರೆ ಎಳೆದಿದ್ದು, ಈ ಯೋಜನೆಗೆ ಕರ್ನಾಟಕ ಸರ್ಕಾರದಿಂದ ಯಾವುದೇ ರೀತಿಯಾದ ಹಣದ ನೆರವನ್ನು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅರಣ್ಯ ಇಲಾಖೆಗೆ ಮಣ್ಣು ಸಂರಕ್ಷಣೆಗೆ ಒತ್ತು ನೀಡಿ ರಾಜ್ಯ ಪರಿಸರ ಚಟುವಟಿಕೆಗಳಿಗೆ 100 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ "ಈಶಾ ಫೌಂಡೇಶನ್ ಅಥವಾ ಸದ್ಗುರುಗಳು ಕರ್ನಾಟಕದಲ್ಲಿನ ಈಗಿನ ಸರ್ಕಾರದಿಂದ ಅಥವಾ ಹಿಂದಿನ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಇಶಾ ಫೌಂಡೇಶನ್ ರಾಜ್ಯ ಸರ್ಕಾರದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಭಾಗಿಯಾಗಿಲ್ಲ ಎಂದು ಇಶಾ ಫೌಂಡೇಶನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ," ಅಂತಾ ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ ತಿಳಿಸಿದೆ.
ಸೂಕ್ತ ರೀತಿಯಲ್ಲಿ ಜಮೀನು ಖರೀದಿ
ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ಎಲ್ಲಾ ಜಮೀನುಗಳನ್ನು ಮೂಲ ಮಾಲೀಕರಿಂದ ಕಾನೂನು ರೀತಿಯಲ್ಲೇ ಜಮೀನು ಖರೀದಿಸಲಾಗಿದೆ. ಸೂಕ್ತ ಮೊತ್ತವನ್ನು ಪಾವತಿಸಿ ಮಾರಾಟ ಪತ್ರಗಳ ಮೂಲಕ ಈ ಜಮೀನನ್ನು ಖರೀದಿಸಲಾಗಿದೆ ಎಂದು ತಿಳಿಸಿದೆ.

ಹರಿದುಬರುತ್ತಲೇ ಇದೆ ಜನರ ದಂಡು
ಆದಿಯೋಗಿ ಶಿವನ ಮೂರ್ತಿಯನ್ನು ನೋಡಲು ಪ್ರತಿನಿತ್ಯ ಭಕ್ತಸಾಗರವೇ ಹರಿದುಬರುತ್ತಿದೆ. ದ್ವಿಚಕ್ರ ವಾಹನ, ಕಾರು ಅಲ್ಲದೇ ಮತ್ತಿತರ ವಾಹನಗಳನ್ನು ಮಾಡಿಕೊಂಡು ಭಕ್ತರು ಆಗಮಿಸುತ್ತಲೇ ಇದ್ದಾರೆ. ಅದರಲ್ಲೂ ಶಿವರಾತ್ರಿ ಸಮೀಪಿಸುತ್ತಿರವ ಕಾರಣ ಶಿವನ ದರ್ಶನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಿಂದಲೂ ಭಕ್ತಗಣ ಹರಿದುಬರುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿ ತನಗೆ ಸಂಬಂಧವಿಲ್ಲದಿದ್ದರೂ, ರಸ್ತೆಯಲ್ಲಿ ನಿಂತು ಭಕ್ತರ ಬಳಿ ಹಣ ವಸೂಲಿಗೆ ಇಳಿದಿದೆ ಎನ್ನುವ ಕೂಗುಗಳು ಎದ್ದಿವೆ.
ಇದಕ್ಕೆ ಜನರಿಂದ ಆಕ್ಷೇಪಗಳು ಕೂಡ ವ್ಯಕ್ತವಾಗುತ್ತಲೇ ಇವೆ. ವಡ್ರೇಪಾಳ್ಯದ ಕ್ರಾಸ್ ಬಳಿ ವಾಹನಗಳನ್ನು ತಡೆದು, ದ್ವಿಚಕ್ರ ವಾಹನಗಳಿಗೆ 10 ರೂಪಾಯಿ ಹಾಗೂ ಕಾರುಗಳಿಗೆ 30 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಲೇ ಇದೆ.

ಆದಿಯೋಗಿ ಮೂರ್ತಿ ಲೋಕಾರ್ಪಣೆ ಆದಾಗಿನಿಂದಲೂ ಇಲ್ಲಿಗೆ ಭಕ್ತಸಾಗರವೇ ಹರಿದುಬರುತ್ತಿದೆ. ಅಲ್ಲದೇ ಶಿವನ ವಿಗ್ರಹ ನೋಡಲು ಬರುವ ಭಕ್ತರಿಂದ ಅವಲಗುರ್ಕಿ ಗ್ರಾಮ ಪಂಚಾಯಿತಿಯ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications