ಚಿಕ್ಕಬಳ್ಳಾಪುರ 2nd ಪಿಯುಸಿ ಪರೀಕ್ಷೆ: 13732 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
ಚಿಕ್ಕಬಳ್ಳಾಪುರ ಮಾರ್ಚ್ 1: ವೃತ್ತಿ ಶಿಕ್ಷಣ, ಪದವಿ ಪ್ರವೇಶ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗಿದೋ ಆಲ್ ದಿ ಬೆಸ್ಟ್....
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ. ಮಾ.1ರಿಂದ ಮಾ.22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 21 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 5 ಪರೀಕ್ಷಾ ಕೇಂದ್ರಗಳು, ಚಿಂತಾಮಣಿಯಲ್ಲಿ 6 ಕೇಂದ್ರಗಳು, ಶಿಡ್ಲಘಟ್ಟದಲ್ಲಿ 2 ಕೇಂದ್ರಗಳು, ಗೌರಿಬಿದನೂರು ನಲ್ಲಿ 4 ಕೇಂದ್ರಗಳು, ಬಾಗೇಪಲ್ಲಿಯಲ್ಲಿ 3 ಕೇಂದ್ರಗಳು ಮತ್ತು ಗುಡಿಬಂಡೆ ತಾಲೂಕಿನಲ್ಲಿ 1 ಕೇಂದ್ರ ಸೇರಿದಂತೆ ಜಿಲ್ಲೆಯ 6 ತಾಲೂಕುಗಳಿಂದ ಒಟ್ಟು 21 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, 13732 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇತ್ತೀಚಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯಲ್ಲಿ, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ವ್ಯವಹಾರಗಳಿಗೆ ಅವಕಾಶ ನೀಡದೆ ಪಾರದರ್ಶಕತೆಯಿಂದ ಪರೀಕ್ಷೆ ಹಮ್ಮಿಕೊಳ್ಳಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕಿಂತ ಮೊದಲೇ ಹಾಜರಿರಬೇಕು. ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ಸಂಬಂಧ ಪಟ್ಟ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ದಂತೆ ಯಾರೇ ಆಗಲಿ ಅನಧಿಕೃತವಾಗಿ ಕೇಂದ್ರದ ಒಳಗೆ ಪ್ರವೇಶಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಪರೀಕ್ಷಾ ಪರಿಕರಗಳ ಭದ್ರತೆ, ಬಯೋಮೆಟ್ರಿಕ್ ನಿರ್ವಹಣೆ, ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳ ಮಾರ್ಗ ಅಧಿಕಾರಿಗಳ ಮೂಲಕ ಪೊಲೀಸ್ ಬಂದೋಬಸ್ತ್ ಮೂಲಕ ಪೂರೈಕೆ, ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್, ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಆಸನ ವ್ಯವಸ್ಥೆ, ಶೌಚ ಗೃಹ ಹಾಗೂ ಇತರ ಎಲ್ಲಾ ಮೂಲ ಸೌಕರ್ಯಗಳ ವ್ಯವಸ್ಥೆ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ಎಷ್ಟು ವಿದ್ಯಾರ್ಥಿಗಳು ನೋಂದಣಿ? ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 3782, ಚಿಂತಾಮಣಿ ತಾಲೂಕಿನಲ್ಲಿ 3301, ಶಿಡ್ಲಘಟ್ಟ ತಾಲೂಕಿನಲ್ಲಿ 2042, ಗೌರಿಬಿದನೂರು ತಾಲೂಕಿನಲ್ಲಿ 2793, ಬಾಗೇಪಲ್ಲಿ ತಾಲೂಕಿನಲ್ಲಿ 1699, ಗುಡಿಬಂಡೆ ತಾಲೂಕಿನಲ್ಲಿ 115 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಅರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆತ್ತವರು/ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರದ ಗೇಟ್ ಬಳಿ ಬಿಟ್ಟು ತೆರಳಬೇಕು,ಯಾರು ಒಳಬರುವಂತಿಲ್ಲ.
ವಿದ್ಯಾರ್ಥಿಗಳು ಪರೀಕ್ಷೆಗೆ 15ನಿಮಿಷ ಮೊದಲು ಹಾಜರಿರಬೇಕು. ಉತ್ತರ ಬರೆದು ಮುಗಿದರೂ ಅವಧಿ ಮುಗಿಯದ ಹೊರತು ಹೊರಹೋಗುವಂತಿಲ್ಲ, ಮೊಬೈಲ್, ಎಲೆಕ್ಟ್ರಾನಿಕ್ ವಾಚ್ ಸಹಿತ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ.
ಎಲೆಕ್ಟ್ರಾನಿಕ್ ವಸ್ತುಗಳಿಗೆ ಪ್ರವೇಶವಿಲ್ಲ:-
ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್, ಇ-ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಎಚ್ಚರಿಕೆ ನೀಡಿದ್ದು, ಎಲೆಕ್ಟ್ರಾನಿಕ್, ಮುಳ್ಳಿನ ಕೈಗಡಿಯಾರವನ್ನೂ ತರುವಂತಿಲ್ಲ. ಆದರೆ, ಸಾಮಾನ್ಯ ಕ್ಯಾಲ್ಕುಕುಲೇಟರ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಅನುಕೂಲಕ್ಕಾಗಿ ಪ್ರತಿಯೊಂದು ಕೊಠಡಿಯಲ್ಲಿಯೂ ಗೋಡೆ ಗಡಿಯಾರ ಅಳವಡಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ:-
ಜಿಲ್ಲೆಯ 21 ಕೇಂದ್ರಗಳಿಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿಗಳು ಪರೀಕ್ಷಾ ಆರಂಭಕ್ಕೆ ಅರ್ಧಗಂಟೆ ಮುನ್ನ ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡೆಗಳನ್ನು ಅಂಚೆ ಕಚೇರಿಗೆ ಪರೀಕ್ಷಾ ಸಿಬ್ಬಂದಿಯೊಂದಿಗೆ ತೆಗೆದುಕೊಂಡು ಹೋಗಲಿದ್ದಾರೆ. ಅದರಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷೆ ನಡೆಯುವ ದಿನ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೂ 200ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಯಾವಾಗ, ಯಾವ ಪರೀಕ್ಷೆ?
• ಮಾ.1: ಕನ್ನಡ/ಆರೇಬಿಕ್, •ಮಾ.4: ಗಣಿತ/ಶಿಕ್ಷಣ ಶಾಸ್ತ್ರ, • ಮಾ.5: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ. 6: ಮಾಹಿತಿ ತಂತ್ರಜ್ಞಾನ / ರೀಟೈಲ್ / ಅಟೋಮೊಬೈಲ್ / ಬ್ಯೂಟಿ ಆ್ಯಂಡ್ ವೆಲ್ಲೆಸ್, ಮಾ.7: ಇತಿಹಾಸ/ಭೌತಶಾಸ್ತ್ರ, •ಮಾ. 9: ಐಚ್ಚಿಕ ಕನ್ನಡ/ಲೆಕ್ಕಶಾಸ್ತ್ರ/ಗೃಹ ವಿಜ್ಞಾನ, •ಮಾ. 11: ತರ್ಕಶಾಸ್ತ್ರ/ವ್ಯವಹಾರ ಅಧ್ಯಯನ, •ಮಾ. 13: ಇಂಗ್ಲಿಷ್, •ಮಾ. 15: ಮನಃಶಾಸ್ತ್ರ/ರಸಾಯನಶಾಸ್ತ್ರ/ಮೂಲ ಗಣಿತ, •ಮಾ.16: ಅರ್ಥಶಾಸ್ತ್ರ, •ಮಾ. 18: ಭೂಗೋಳಶಾಸ್ತ್ರ/ಜೀವಶಾಸ್ತ್ರ, •ಮಾ. 20: ಸಮಾಜಶಾಸ್ತ್ರ/ವಿದ್ಯುನ್ಮಾನಶಾಸ್ತ್ರ/ಗಣಕ ವಿಜ್ಞಾನ, •ಮಾ.21:ಉರ್ದು /ಸಂಸ್ಕೃತ, •ಮಾ.22:ಹಿಂದಿ.
ಬಾಗೇಪಲ್ಲಿ ಸರಕಾರಿ ಬಾಲಕರ ಪರೀಕ್ಷಾ ಕೇಂದ್ರದ ಪರೀಕ್ಷಾ ಮುಖ್ಯ ಅಧಿಕ್ಷಕ ಎ. ರವೀಂದ್ರ ಮಾತನಾಡಿ, 'ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಬೇಕಾದ ಎಲ್ಲ ಸಿದ್ಧತೆಗಳಾಗಿವೆ. ಹಿಜಾಬ್ / ಡ್ರೆಸ್ ಕೋಡ್ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸಿಸಿಟಿವಿ ಕ್ಯಾಮೆರಾ ನಿಗಾ ಸಹಿತ ಪೊಲೀಸ್ ಭದ್ರತೆ ಪರೀಕ್ಷಾ ಕೇಂದ್ರಗಳಿಗಿರಲಿದೆ.












Click it and Unblock the Notifications