ಅಧಿಕಾರ ಕಳೆದುಕೊಂಡ ಬಿಜೆಪಿ: ಹುದ್ದೆ ಕಳೆದುಕೊಂಡ ಚಿಕ್ಕಬಳ್ಳಾಪುರ ನಾಯಕರು
ಚಿಕ್ಕಬಳ್ಳಾಪುರ, ಮೇ 26: ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ನಾಮ ನಿರ್ದೇಶನದಡಿ ನಾನಾ ಹುದ್ದೆಗಳಲ್ಲಿ ನೇಮಕಗೊಂಡು ಅಧಿಕಾರ ಅನುಭವಿಸಿದ ಹಲವು ನಾಯಕರು ಈಗ ಹುದ್ದೆ ಕಳೆದುಕೊಂಡಿದ್ದಾರೆ.
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆದ್ದು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದೆ. ಹೊಸ ಸರ್ಕಾರ ಬಂದ ಬೆನ್ನೆಲ್ಲೇ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾಮ ನಿರ್ದೇಶನದಡಿ ನಾನಾ ಹುದ್ದೆಗಳಲ್ಲಿದ್ದ ಜಿಲ್ಲೆಯ ನಾಯಕರಿಗೆ ಈಗ ಅಧಿಕಾರ ಕೈ ತಪ್ಪಿದೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಭಾವಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ವರಿಷ್ಠರ ಮೇಲೆ ಒತ್ತಡ ಹೇರಿ ಜಿಲ್ಲೆಯ ಅನೇಕ ನಾಯಕರಿಗೆ ನಾನಾ ಹುದ್ದೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಚುನಾವಣೆಯಲ್ಲಿ ಅವರ ಸೋಲಿನೊಂದಿಗೆ ಎಲ್ಲವನ್ನು ಕಳೆದುಕೊಳ್ಳುವಂತಾಗಿದೆ.
ಯಾರಿಗೆ ಯಾವ ಹುದ್ದೆ ಸಿಕ್ಕಿತ್ತು?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಎಂಟಿಸಿ ಉಪಾಧ್ಯಕ್ಷರಾಗಿ ಕೆ.ವಿ.ನವೀನ್ ಕಿರಣ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಕಂಠೀರವ ಸ್ಟೂಡಿಯೋ ಸಮಿತಿ ಅಧ್ಯಕ್ಷರಾಗಿ ಎನ್.ಎಂ.ರವಿನಾರಾಯಣರೆಡ್ಡಿ, ರೇಷ್ಮೆ ಉದ್ದಿಮೆಗಳ ನಿಗಮ ಮಂಡಳಿ ನಿರ್ದೇಶಕ ಎಸ್‍ಆರ್‍ಎಸ್ ದೇವರಾಜ್, ಕೆಆರ್‍ಇಡಿಎಲ್ ನಿರ್ದೇಶಕರಾಗಿ ಸಿ.ಪಿ.ಮಂಜುನಾಥ್ ಗೌಡ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದು, ಇದಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರ, ಆಶ್ರಯ ಸಮಿತಿ, ನಗರಸಭಾ, ಪುರಸಭಾ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರ ನಾಮ ನಿರ್ದೇಶನ, ಭೂ ನ್ಯಾಯ ಮಂಡಳಿ, ಭೂ ಮಂಜೂರಾತಿ, ಆರೋಗ್ಯ ರಕ್ಷಾ ಸಮಿತಿ, ಮುಜರಾಯಿ ಸಮಿತಿ, ಕೋಚಿಮುಲ್ ನಾಮ ನಿರ್ದೇಶನ ಸೇರಿದಂತೆ ಸರ್ಕಾರಿಯ ಅಧೀನ ವಿವಿಧ ಸಂಸ್ಥೆಗಳಲ್ಲಿ ಹಲವರಿಗೆ ಹುದ್ದೆಗಳು ಸಿಕ್ಕಿದ್ದವು.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಿಂದ ವಿವಿಧ ಹುದ್ದೆಗಳಿಗೆ ನೇಮಕಗೊಂಡಿದ್ದ ಬಹುತೇಕರು ಬಿಜೆಪಿಗರು. ಸರ್ಕಾರದ ನಾಮ ನಿರ್ದೇಶನ ಪತ್ರದಲ್ಲಿ ಮುಂದಿನ ಆದೇಶದವರೆಗೆ ನೇಮಕಾತಿ ಚಾಲ್ತಿಯಲ್ಲಿರುತ್ತದೆ ಎಂಬುದನ್ನು ಉಲ್ಲೇಖಿಸಿತ್ತು.

ಆದೇಶ ಹೊರಡಿಸಿದ ನೂತನ ಸರ್ಕಾರ
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಸೋಮವಾರ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಈ ಸುತ್ತೋಲೆಯಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಎಲ್ಲ ಅಧ್ಯಕ್ಷರು/ ನಿರ್ದೇಶಕರು/ ಸದಸ್ಯರ ನಾಮ ನಿರ್ದೇಶನಗಳನ್ನು ಮೇ.22 (ಸೋಮವಾರ) ದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಎಂಬ ಆದೇಶ ಹೊರಡಿಸಿದೆ.
ಆರೇಳು ತಿಂಗಳಷ್ಟೇ ಸಿಕ್ಕ ಅಧಿಕಾರ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಜಿಲ್ಲಾ ಬಿಜೆಪಿ ಘಟಕವು ಸೂಕ್ತ ನಾಯಕರ ಶಿಫಾರಸು ಪಟ್ಟಿಯನ್ನು ಕಳುಹಿಸಿದರೂ ಪರಿಶೀಲನೆ, ಒಮ್ಮತದ ತೀರ್ಮಾನ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ನಾಮ ನಿರ್ದೇಶನದಡಿ ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ವಿಳಂಬವಾಯಿತು. ಇದರಿಂದ ನಾಲ್ಕೂವರೆ ವರ್ಷದ ಆಡಳಿತಾವಧಿಯ ಬದಲಿಗೆ ಹಲವರಿಗೆ ಆರೇಳು ತಿಂಗಳು ಮಾತ್ರ ನಾಮ ನಿರ್ದೇಶಿತರು ಅಧಿಕಾರವನ್ನು ಚಲಾಯಿಸುವಂತಾಯಿತು.
ಬಿಜೆಪಿಯ ಅಧಿಕಾರ ಬಲ ಕುಸಿತ
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್, ತಲಾ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿದಿರುವುದರಿಂದ ಸ್ಥಳೀಯ ಹಲವು ನಾಯಕರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾರೂ ಶಾಸಕರಾಗಿ ಆಯ್ಕೆಯಾಗಿಲ್ಲ, ರಾಜ್ಯದಲ್ಲೂ ಪಕ್ಷ ಅಧಿಕಾರವನ್ನು ಹಿಡಿಯುತ್ತಿಲ್ಲ. ಹೀಗಾಗಿ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾಮ ನಿರ್ದೇಶಿತರ ನೇಮಕಾತಿ ರದ್ದತಿಯಿಂದ ಜಿಲ್ಲೆಯಲ್ಲಿ ಬಿಜೆಪಿಯ ಅಧಿಕಾರ ಬಲವು ಮತ್ತಷ್ಟು ಕುಸಿಯಲಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications