ನಮ್ಮ ಪಾಲಿನ 177.25 ಟಿಎಂಸಿ ಅಡಿ ಕಾವೇರಿ ಸಿಗಲಿದೆ: ಇಪಿಎಸ್
ಚೆನ್ನೈ, ಜುಲೈ 03: ಸುಪ್ರೀಂಕೋರ್ಟ್ ಆದೇಶದಂತೆ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 31.24 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವ ಬೆನ್ನಲ್ಲೇ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ನಿರ್ವಹಣಾ ಪ್ರಾಧಿಕಾರ(CWWA)ದ ಸಭೆಯನ್ನು ಐತಿಹಾಸಿಕ ಎಂದು ಕರೆದಿರುವ ಪಳನಿಸ್ವಾಮಿ,ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಸಿಗಬೇಕಾಗಿರುವ 177.2 ಟಿಎಂಸಿ ಅಡಿ ಕಾವೇರಿ ನೀರು ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ಪ್ರಾಧಿಕಾರದ ಮಧ್ಯಂತರ ಮುಖ್ಯಸ್ಥ ಮಸೂದ್ ಹುಸೇನ್ ನೇತೃತ್ವದ ಸಭೆಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ 9 ಸದಸ್ಯರು ಪಾಲ್ಗೊಂಡಿದ್ದರು. ನಾಲ್ಕು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಐವರು ಪ್ರತಿನಿಧಿ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿಯ ಒಂದೊಂದು ಪ್ರತಿನಿಧಿ ಇದ್ದರು. ಈ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗಿಯಾಗಿದ್ದರು ಎಂದು ತಮಿಳುನಾಡಿನ ಸಿಎಂ ಪಳನಿಸ್ವಾಮಿ ಅವರು ಸದನಕ್ಕೆ ತಿಳಿಸಿದರು.

ಈ ಬಗ್ಗೆ ವಿವರ ನೀಡಿದ ಪಳನಿಸ್ವಾಮಿ, ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡು 45.95 ಟಿಎಂಸಿ ಅಡಿ ನೀರು, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ ಅಡಿ ನೀರು, ಅಕ್ಟೋಬರ್ ನಲ್ಲಿ 20.22 ಟಿಎಂಸಿ ಅಡಿ ನೀರು, ನವೆಂಬರ್ ನಲ್ಲಿ 13.78 ಟಿಎಂಸಿ ಅಡಿ ನೀರು, ಡಿಸೆಂಬರ್ ನಲ್ಲಿ 7.35 ಟಿಎಂಸಿ ಅಡಿ ನೀರು, ಜನವರಿಯಲ್ಲಿ 2.76 ಟಿಎಂಸಿ ಅಡಿ, ಫೆಬ್ರವರಿಯಿಂದ ಮೇ ತನಕ 2.50 ಟಿಎಂಸಿ ಅಡಿ, ಒಟ್ಟಾರೆ 177.25 ಟಿಎಂಸಿ ಅಡಿ ನೀರು ಸಿಗಲಿದೆ ಎಂದರು.
ಸುಪ್ರೀಂಕೋರ್ಟ್ ಅಂತಿಮ ಆದೇಶ 15 ವರ್ಷಗಳ ಮಾನ್ಯವಾಗಲಿದ್ದು, ತಮಿಳುನಾಡಿಗೆ ಸಿಗಬೇಕಿರುವ 177.25 ಟಿಎಂಸಿ ಅಡಿ ನೀರಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.












Click it and Unblock the Notifications