ಚೆನ್ನೈ ಮಳೆ: 9 ಜಿಲ್ಲೆಗಳಲ್ಲಿ ಇನ್ನೆರಡು ದಿನ ಶಾಲಾ-ಕಾಲೇಜುಗಳಿಗೆ ರಜೆ
ಚೆನ್ನೈ ನವೆಂಬರ್ 10: ಕಳೆದ ಕೆಲ ದಿನಗಳಿಂದ ಚೆನ್ನೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಯಾಕೆಂದ್ರೆ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮತ್ತೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಚೆನ್ನೈ ಮತ್ತು ಇತರ ಎಂಟು ಜಿಲ್ಲೆಗಳಲ್ಲಿ ನವೆಂಬರ್ 10 ಮತ್ತು 11 ರಂದು ಸರ್ಕಾರ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಈವರೆಗೆ ಮಳೆ ಸಂಬಂಧಿತ ಘಟನೆಗಳಿಂದ ಐದು ಜನರು ಸಾವನ್ನಪ್ಪಿದ್ದು 270 ಕ್ಕೂ ಹೆಚ್ಚು ಗುಡಿಸಲುಗಳು ಮತ್ತು 70 ಮನೆಗಳಿಗೆ ಹಾನಿಯಾಗಿದೆ.
ಹವಾಮಾನ ಇಲಾಖೆಯ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನವೆಂಬರ್ 10 ಮತ್ತು 11 ರಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್‌ಪೇಟ್, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರು ಮತ್ತು ಮೈಲಾದುತುರೈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಉತ್ತರ ತಮಿಳುನಾಡು ಮತ್ತು ಪಕ್ಕದ ಕರಾವಳಿ ಪ್ರದೇಶಗಳಲ್ಲಿ 3.1 ಕಿಮೀ ಎತ್ತರದವರೆಗೆ ಬೀಸುವ ಗಾಳಿಯು ಮಳೆಯ ಚಟುವಟಿಕೆಯನ್ನು ಪ್ರಚೋದಿಸುತ್ತಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ತಮಿಳುನಾಡಿನ ನಿರ್ದಿಷ್ಟ ಪ್ರದೇಶಗಳು ಮತ್ತು ನೆರೆಯ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಕಾರೈಕಲ್‌ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ತಮಿಳುನಾಡಿನಲ್ಲಿ 20:30 ಗಂಟೆಗಳ ಅವಧಿಯಲ್ಲಿ 20 cm ಮಳೆಯಾಗಿದ್ದು ನಾಗಪಟ್ಟಣಂನಲ್ಲಿ 15 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು IMD ವರದಿ ಮಾಡಿದೆ.
ಬುಧವಾರ ಮತ್ತು ಗುರುವಾರ ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ಇದೆ. ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಡಲೂರು, ಮೈಲಾದುತುರೈ, ತಂಜಾವೂರು, ತಿರುವಾರೂರ್, ನಾಗಪಟ್ಟಿಣಂ, ರಾಣಿಪೇಟ್, ವೆಲ್ಲೂರು, ತಿರುವಣ್ಣಾಮಲೈ, ಕಲ್ಲಕುರಿಚಿ, ಅರಿಯಲೂರ್, ಪೆರಂಬಲೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ 2 ಗಂಟೆಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ಕೆಲವು ಭಾಗಗಳಲ್ಲಿ ಶನಿವಾರದಿಂದ ಭಾರೀ ಮಳೆಯಾಗುತ್ತಿದೆ, ಇದು ಇತ್ತೀಚಿನ ವರ್ಷಗಳಲ್ಲಿ ಭಾರೀ ಮಳೆಯಾಗಿದೆ.
ಚೆನ್ನೈ ಮತ್ತು ಸಮೀಪದ ಚೆಂಗಲ್‌ಪೇಟ್‌ನಂತಹ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು ರಾಜ್ಯ ರಾಜಧಾನಿಯ ಕೆಲವು ಭಾಗಗಳಲ್ಲಿ ನಿಂತ ನೀರಿನ ಪ್ರಮಾಣ ಕಡಿಮೆಯಾಗಿದೆ.
ಇನ್ನೂ ಕಳೆದ ಶನಿವಾರ ರಾತ್ರಿ ಮತ್ತು ಭಾನುವಾರದಂದು ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಉಪನಗರಗಳಲ್ಲಿ ಭಾರೀ ಮಳೆ ಸುರಿದು, ತಮಿಳುನಾಡು ರಾಜಧಾನಿಯಲ್ಲಿ ಭಾರಿ ಪ್ರವಾಹದಂತೆ ನೀರು ಹರೆದಿದೆ. ಭಾನುವಾರ ಬೆಳಿಗ್ಗೆ 8.30 ರ ಹೊತ್ತಿಗೆ ನಗರದಲ್ಲಿ ಸುರಿದ ಮಳೆ 2015 ರ ನಂತರದ ದಾಖಲೆಗೆ ಸಾಕ್ಷಿಯಾಗಿದೆ. ಚೆನ್ನೈ ಸೇರಿದಂತೆ 12 ಜಿಲ್ಲೆಗಳು ಮಳೆಯಿಂದ ಹಾನಿಗೀಡಾಗಿದೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಎಲ್ಲಾ ಸಚಿವರು ಮತ್ತು ಡಿಎಂಕೆ ಸಂಸದರು ಮತ್ತು ಶಾಸಕರಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಸಂತ್ರಸ್ತರಿಗೆ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತಿದೆ. ಭಾನುವಾರ ಮಧ್ಯಾಹ್ನದವರೆಗೆ 44 ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 50,000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ 150 ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳನ್ನು ಸಿದ್ಧಪಡಿಸಿದೆ. ಮಧುರೈ ಮತ್ತು ಕಡಲೂರಿಗೆ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿದೆ. ಸುಮಾರು 900 ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ತುರ್ತು ಪರಿಸ್ಥಿತಿಗಳಿಗಾಗಿ ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಭಾನುವಾರದಂದು ಭೇಟಿ ನೀಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಕೊಳತ್ತೂರ್, ಸೈದಾಪೇಟ್, ಪೆರಂಬೂರ್, ಪುರಸೈವಾಲ್ಕಂ, ಕೊಸಪ್ಪೆಟ್ ಮತ್ತು ಒಟ್ಟೇರಿಗಳಿಗೆ ಭೇಟಿ ನೀಡಿ ಶಿಬಿರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಎಂಕೆ ಸ್ಟಾಲಿನ್ ಅವರು ಯಾವುದೇ ಪ್ರದೇಶ ಜಲಾವೃತವಾಗದಂತೆ ನೋಡಿಕೊಳ್ಳಲು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಹಾರ ಶಿಬಿರಗಳಲ್ಲಿ ಕೋವಿಡ್-19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ.