ಟಿಕ್‌ಟಾಕ್ ಮಾಡಿದ್ರೆ ಮೊಬೈಲ್ ಒಡೆದ್ಹಾಕ್ತೀನಿ ಅಂದಿದ್ದಕ್ಕೆ ಮಹಿಳೆ ಆತ್ಮಹತ್ಯೆ
ಚೆನ್ನೈ, ಜೂನ್ 13: ಮೂರು ಹೊತ್ತು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅದರಲ್ಲೇ ಮುಳುಗಿರ್ತೀಯ ಎಂದು ಪತಿ ಬೈದಿದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್ ಬಳಿ ನಡೆದಿದೆ.
ನಿತ್ಯ ಮನೆ ಕೆಲಸವನ್ನೆಲ್ಲ ಬದಿಗಿಟ್ಟು ಮೊಬೈಲ್ ಹಿಡಿದುಕೊಂಡು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅಪ್ ಲೋಡ್ ಮಾಡುತ್ತಾ, ಬೇರೆ ವಿಡಿಯೋಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದ ಪತ್ನಿಯನ್ನು ನೋಡಿ ಬೇಸರಗೊಂಡು ಪತಿ ಗದರಿದ್ದರು. ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದರು.
ಪೆರಂಬೂರ್ ಮೂಲದ ಅನಿತಾ(24) ಎಂಬಾಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಟಿಕ್ ಟಾಕ್ನಲ್ಲೇ ಹರಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ವಿಷ ಸೇವಿಸಿ ಅಸ್ವಸ್ಥಳಾಗಿದ್ದ ಆಕೆಯನ್ನು ಮೊದಲಿಗೆ ಅರಿಯಲೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಮೃತೆ ಅನಿತಾ, ಪಳನಿವೇಲ್(24) ಎಂಬುವರೊಂದಿಗೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿದೆ.
ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋದಲ್ಲಿ ದಾಖಲಿಸಿದ್ದು, ನನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ತನ್ನ ಸ್ನೇಹಿತೆಯಿಂದ ಅನಿತಾಗೆ ಆ್ಯಪ್ ಪರಿಚಯವಾಗಿತ್ತಂತೆ. ಆ್ಯಪ್ ಗೀಳಿಗೆ ಒಳಗಾಗಿ ತನ್ನ ಕುಟುಂಬ ಮತ್ತು ಮಕ್ಕಳನ್ನು ಆಲಕ್ಷಿಸಿದ್ದಳು ಎಂದು ಅನಿತಾ ಪಾಲಕರು ಆರೋಪಿಸಿದ್ದಾರೆ.
ಆ್ಯಪ್ ಬಳಸುತ್ತಾ ಅತಿರೇಕಕ್ಕೆ ಹೋಗಿದ್ದ ಆಕೆಯ ಬಗ್ಗೆ ಪಾಲಕರು ಪತಿಗೆ ತಿಳಿಸಿದಾಗ, ಕರೆ ಮಾಡಿ ಅದರಿಂದ ದೂರವಿರುವಂತೆ ಆಕೆಗೆಹೇಳಿದ್ದನಂತೆ. ಆದರೆ, ಅದನ್ನು ನಿರ್ಲಕ್ಷಿಸಿ ಆಕೆ ಆ್ಯಪ್ ಮುಂದುವರಿಸಿದ್ದಳು ಎನ್ನುವ ಮಾತು ಕೇಳಿಬಂದಿದೆ.












Click it and Unblock the Notifications