ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ

ಬೆಂಗಳೂರು, ಮೇ. 23 : ತಮಿಳುನಾಡಿನ ರಾಜಕೀಯ ನಾಟಕವನ್ನು ಗಮನವಿಟ್ಟು ನೋಡುತ್ತಿರುವವರು, ಓ ಪನ್ನೀರ್ ಸೆಲ್ವಂ ಎಂಬ ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟ, ಆಗಾಗ ಕಣ್ಣೀರು, ಒಂದಿಷ್ಟು ಪನ್ನೀರು ಸುರಿಸುವ ವ್ಯಕ್ತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗೆಯೆ, ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ.

ಏಕೆಂದರೆ, ಇಂಥ 'ಮಾಜಿ' ಮುಖ್ಯಮಂತ್ರಿಯೊಬ್ಬರು ಹಿಂದೆಂದೂ ಹುಟ್ಟಿಲ್ಲ, ಮುಂದೆಂದೂ ಬಹುಶಃ ಹುಟ್ಟುವುದೂ ಇಲ್ಲ. ಅವರ ಸ್ವಾಮಿನಿಷ್ಠೆ ಪರಾಕಾಷ್ಠೆ ಎಂಥ ಸ್ವಾಭಿಮಾನಿಯನ್ನೂ ದಂಗುಬಡಿಸುತ್ತದೆ. ಆದರೆ, ಈ ಪನ್ನೀರ್ ಸೆಲ್ವಂ ಅವರಿಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವಾದರೂ ಗೊತ್ತಿದೆಯಾ, ಡೌಟು.

ಪನ್ನೀರ್ ಸೆಲ್ವಂ ಎಂಬ ಬರೊಬ್ಬರಿ ಅರವತ್ನಾಲ್ಕು ವರ್ಷದ 'ಪ್ರಬುದ್ಧ' ರಾಜಕಾರಣಿ, ಜಯಲಲಿತಾಗಾಗಿ ಏನು ಮಾಡಲೂ ಸಿದ್ಧ. ಜಯಲಲಿತಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ತೀರ್ಪಿತ್ತ ಕ್ಷಣವೇ ಮುಖ್ಯಮಂತ್ರಿ ಕುರ್ಚಿಯಿಂದ ಚಟಕ್ಕನೆ ಎದ್ದು 'ಅಮ್ಮಾ' ಈ ಕುರ್ಚಿ ನಿಮಗಾಗಿ ಎಂದು ವಿನಮ್ರವಾಗಿ ನುಡಿದಿದ್ದರು. [ತಮಿಳುನಾಡಿನಲ್ಲಿ ಅಮ್ಮನ ಆಡಳಿತ ಆರಂಭ]

There is a politician called Panneer Selvam in Tamil Nadu

ಹೀಗೆ ಮೊದಲನೇ ಬಾರಿ ಮಾಡಿದ್ದರೆ ತಮಿಳುನಾಡಿನ ಪ್ರಜ್ಞಾವಂತ ಜನರು ಕ್ಷಮಿಸುತ್ತಿದ್ದರೋ ಏನೋ. ಆದರೆ ಇದು ಆಗಿದ್ದು ಎರಡನೇ ಬಾರಿ! 2001ರಲ್ಲಿ ಮುಖ್ಯಮಂತ್ರಿ ಪಟ್ಟದಲ್ಲಿ ಜಯಲಲಿತಾ ಕುಳಿತುಕೊಳ್ಳುವಂತಿಲ್ಲ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ, ಭರ್ತಿ ಎರಡು ಬಕೇಟ್ ಕಣ್ಣೀರು ಸುರಿಸಿದ್ದ ಪನ್ನೀರ್ ಸೆಲ್ವಂ, ಬೇಡ ಬೇಡ ಅನ್ನುತ್ತಲೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.

2002ರಲ್ಲಿ ಅದೇ ಸರ್ವೋಚ್ಚ ನ್ಯಾಯಾಲಯ, ಜಯಲಲಿತಾ ಅವರನ್ನು ದೋಷಮುಕ್ತರನ್ನಾಗಿ ಮಾಡಿ ತೀರ್ಪು ಹೊರಡಿಸಿದ ಮರುಕ್ಷಣವೇ ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಕುರ್ಚಿ ಬಿಟ್ಟುಕೊಟ್ಟಿದ್ದರು. ಆಗ, ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿರಲಿಲ್ಲ 'ಆಟದ ಗೊಂಬೆ'ಯಾಗಿದ್ದರು ಎಂದು ಟೀಕೆಗೊಳಗಾಗಿದ್ದರು.

ಇವರನ್ನು ಸ್ವಾಮಿನಿಷ್ಠ ಅನ್ನಬೇಕೋ, ಸ್ವಾಭಿಮಾನವಿಲ್ಲದ ಸಜ್ಜನ ಅನ್ನಬೇಕೋ ಅಥವಾ ಜಯಲಲಿತಾ ಆಡುತ್ತಿರುವ ಚದುರಂಗದಾಟದ ಪಗಡೆ ಕಾಯಿ ಅನ್ನಬೇಕೊ? ಬೇರೆ ಯಾರೇ ಆಗಿದ್ದರೂ, ಮುಖ್ಯಮಂತ್ರಿ ಪಟ್ಟದಿಂದ ಇಳಿಯುವಾಗ ಕನಿಷ್ಠಪಕ್ಷ ಪ್ರತಿರೋಧ ಅಥವಾ ಅಸಮಾಧಾನ ತೋರಿಸುತ್ತಿದ್ದರು. ಆದರೆ, ಪನ್ನೀರ್ ಬತ್ತಳಿಕೆಯಲ್ಲಿ ಆ ಯಾವ ಅಸ್ತ್ರಗಳೂ ಇಲ್ಲ.

There is a politician called Panneer Selvam in Tamil Nadu

65 ಕೋಟಿ ರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಮುಖ್ಯಮಂತ್ರಿ ಸೀಟು ಮತ್ತೆ ಏರಿದ್ದ ಪನ್ನೀರ್ ಸೆಲ್ವಂ ಪ್ರಮಾಣವಚನ ಸ್ವೀಕರಿಸುವಾಗ ಬಿಕ್ಕಳಿಸಿ ಬಿಕ್ಕಳಿಸಿ ಕರ್ಚೀಫನ್ನು ಪೂರ್ತಿ ಒದ್ದೆ ಮಾಡಿಕೊಂಡಿದ್ದರು. ಈಗ ಜಯಲಲಿತಾ ಖುಲಾಸೆಯಾಗಿ ಮತ್ತೆ ಮುಖ್ಯಮಂತ್ರಿಯಾದಾಗ ಮತ್ತೆ ಬಗ್ಗಿ ನಮಸ್ಕಾರ ಮಾಡಿದ್ದಾರೆ.

ಎಷ್ಟೇ ಸ್ವಾಮಿನಿಷ್ಠೆ ಇರಲಿ ಒಂದು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಅನಿವಾರ್ಯ ಕಾರಣದಿಂದಲಾದರೂ ಬೇರೆಯವರಿಗೆ ಪಟ್ಟ ಬಿಟ್ಟುಕೊಟ್ಟ ನಂತರ ಕೆಳಹಂತದ ಖಾತೆ ನಿರ್ವಹಿಸಲು ಒಪ್ಪುತ್ತಾರಾ? ಪ್ರಧಾನಿಯಾದವರು ಮುಖ್ಯಮಂತ್ರಿಯಾಗ್ತಾರಾ? ಮುಖ್ಯಮಂತ್ರಿಯಾದವರು ಕೆಳಹಂತದ ಸಚಿವರಾಗಲು ಒಪ್ತಾರಾ? ಇದು ಪನ್ನೀರ್ ಸೆಲ್ವಂ ಅವರಿಂದ ಮಾತ್ರ ಸಾಧ್ಯ, ಅದೂ ತಮಿಳುನಾಡಿನಲ್ಲಿ ಮಾತ್ರ ಸಾಧ್ಯ!

ರಾಜಕೀಯಕ್ಕೆ ಕಾಲಿಡುವ ಮೊದಲು ಪೆರಿಯಾಕುಲಂ ಎಂಬ ತನ್ನ ಹಳ್ಳಿಯಲ್ಲಿ ಚಹಾ ಅಂಗಡಿ ಇಟ್ಟಿದ್ದ ಪನ್ನೀರ್ ಸೆಲ್ವಂ ಹುಟ್ಟಿದ್ದು ಸಂಕ್ರಾಂತಿಯಂದು. ಮದುವೆಯಾಗಿದ್ದು ಮೂರು ಮಕ್ಕಳಿದ್ದಾರೆ. ಅವರಾದರೂ ಇವರ ಬಗ್ಗೆ ಏನಂತಾರೋ? [ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದ ರಜನಿ ಪತ್ರ]

ಮುಂದೆ ಯಾವಾಗಲಾದರೂ (ಕೆಲ ಶತಮಾನಗಳ ನಂತರ) ಇವರ ರಾಜಕೀಯ ಜೀವನ ಶಾಲಾ ಮಕ್ಕಳ ಪಠ್ಯದಲ್ಲಿ ಸೇರಿಕೊಂಡರೆ ಹೇಗಿರುತ್ತದೆ? ಇಂಥವರು ಭಾರತದ ರಾಜಕೀಯದಲ್ಲಿ ಮತ್ತಾರಾದರೂ ಇದ್ದಾರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+