ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯವೂ ಸಿಕ್ತು!
ಚೆನ್ನೈ, ಫೆ.19: ನಾಟಕೀಯ ಬೆಳವಣಿಗೆಯೊಂದರಲ್ಲಿ ಇಂದು ಬೆಳಗ್ಗೆ ತುರ್ತು ಸಂಪುಟ ಸಭೆ ಸೇರಿದ ಜಯಲಲಿತಾ ಸಂಪುಟವು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಎಲ್ಲಾ ಏಳು ಆರೋಪಿಗಳನ್ನು ಜೈಲಿಂದ ಬಿಡುಗಡೆ ಮಾಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಜಯಲಲಿತಾ ಸುಲಲಿತವಾಗಿ ತಮಿಳರ ಮನಗೆದ್ದಿದ್ದಾರೆ ಎನ್ನಬಹುದು.
ನಿನ್ನೆಯಷ್ಟೇ ಸುಪ್ರೀಂಕೋರ್ಟ್ ರಾಜೀವ್ ಗಾಂಧಿ ಹಂತಕರಿಗೆ ಜೀವದಾನ ನೀಡಿತ್ತು. ಮೂವರು ಹಂತಕರಿಗೆ ಗಲ್ಲು ಬೇಡ, ಜೀವಾವಧಿ ಶಿಕ್ಷೆ ನೀಡಿ ಸಾಕು ಎಂದಿತ್ತು, ಕೋರ್ಟ್. ಸಂತನ್, ಮುರುಗನ್ ಹಾಗೂ ಪೆರಾರಿವಲನ್ ಅವರು ಗಲ್ಲುಶಿಕ್ಷೆ ತಪ್ಪಿಸಿಕೊಂಡಿದ್ದರು. ಜತೆಗೆ, ನಳಿನಿ (ಮರುಗನ್ ಪತ್ನಿ), ರವಿಚಂದ್ರನ್, ಜಯಕುಮಾರ್ ಮತ್ತು ರಾಬರ್ಟ್ ಪಾಯಸ್ ಜೈಲಿನಲ್ಲಿದ್ದರು. ಇವರೆಲ್ಲರೂ ಇನ್ನು ಸ್ವತಂತ್ರರು.

ಕೇಂದ್ರದ ಅಂಗಳದಲ್ಲಿ ಜಯಾ ಚೆಂಡು: ಕೇಂದ್ರವು ಶೀಘ್ರವೇ ತಮಿಳುನಾಡು ಸಂಪುಟದ ನಿರ್ಣಯಕ್ಕೆ ಅಂಕಿತ ಹಾಕುವ ಸಾಧ್ಯತೆಯಿದ್ದು, ಇಂದೋ ಅಥವಾ ನಾಳೆಯೇ ರಾಜೀವ್ ಗಾಂಧಿ ಹಂತಕರು ಸ್ವತಂತ್ರರಾಗುವುದು ಖಚಿತವಾಗಿದೆ. ಪ್ರಕರಣದ ಎಲ್ಲಾ ಏಳು ಮಂದಿ ಹಂತಕರಿಗೂ ಜೈಲಿನಿಂದ ಮುಕ್ತಿ ಸಿಗುವುದು ಖಚಿತವಾಗಿದೆ. ಒಂದು ವೇಳೆ ಕೇಂದ್ರವು ಜಯಾ ಕೋರಿಕೆಗೆ ಅಸ್ತು ಅನ್ನದಿದ್ದರೆ ಜಯಲಲಿತಾ ಅವರೇ ತಮ್ಮ ಪರಮಾಧಿಕಾರ ಬಳಸಿ ಮೂರು ದಿನಗಳ ಬಳಿಕ ಇವರನ್ನು ಜೈಲಿಂದ ಬಿಡುಗಡೆ ಮಾಡಬಹುದು.
ಏನಾಗಿತ್ತು ?: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರನ್ನು 1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ರಾಜೀವ್ ಗಾಂಧಿ ಅವರು ಎಲ್ ಟಿಟಿಇ ನಡೆಸಿದ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. ಎಲ್ ಟಿಟಿಐ ಪರ ನಿಲುವು ಹೊಂದಿದ್ದ ಬುಲ್ಲೂರ್, ದಾಸ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಶುಭ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಇದನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಸುದೀರ್ಘ ವಿಚಾರಣೆ ನಡೆದ ಬಳಿಕ ಆರೋಪಿಗಳಿಗೆ 1998ರಲ್ಲಿ ಮದ್ರಾಸ್ ಹೈಕೋರ್ಟ್ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳ ಪರ ವಕೀಲರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications