ಆನ್‌ಲೈನ್ ಜೂಜಿಗೆ ಬಿತ್ತು ಬ್ರೇಕ್; ತಮಿಳುನಾಡಿನಲ್ಲಿ ಕಾಯ್ದೆ ಜಾರಿ
ಚೆನ್ನೈ, ಫೆಬ್ರುವರಿ 04: ರಾಜ್ಯದಲ್ಲಿ ಆನ್ ಲೈನ್ ಜೂಜಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ತಮಿಳುನಾಡು ಸರ್ಕಾರ, ಗುರುವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದೆ.
ತಮಿಳುನಾಡು ಡಿಸಿಎಂ ಪನ್ನೀರ್ ಸೆಲ್ವಂ ಕಾಯ್ದೆ ಮಂಡಿಸಿದ್ದು, ಈ ಕಾಯ್ದೆ ಪ್ರಕಾರ ಆನ್ ಲೈನ್ ಜೂಜಿನಲ್ಲಿ ತೊಡಗಿಕೊಂಡವರಿಗೆ ಐದು ಸಾವಿರ ರೂಪಾಯಿ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಆನ್ ಲೈನ್ ಜೂಜಿನ ಆಟಗಳನ್ನು ಆಯೋಜಿಸುವವರಿಗೆ 10 ಸಾವಿರ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎನ್ನಲಾಗಿದೆ.
ಕಂಪ್ಯೂಟರ್, ಮೊಬೈಲ್ ಯಾವುದೇ ಸಾಧನ ಅಥವಾ ಗೇಮಿಂಗ್ ಸಾಧನ ಬಳಸಿಕೊಂಡು ಆನ್ ಲೈನ್ ಆಟ ಆಡುವುದು ನಿಷೇಧಿತ ಎಂದು ಹೊಸ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಲಾಟರಿಯನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ.

ತಮಿಳುನಾಡು ಸರ್ಕಾರ ದುಡ್ಡು ನೀಡಿ ಆನ್ ಲೈನ್ ಗೇಮ್, ಫ್ಯಾಂಟಸಿ ಲೀಗ್, ಆಪ್ ಆಧಾರಿತ ಗೇಮಿಂಗ್ ನಿಷೇಧ ಮಾಡುವ ಕುರಿತು ಈ ಮುನ್ನವೇ ಆಲೋಚಿಸಿತ್ತು. ಕಳೆದ ನವೆಂಬರ್ ನಲ್ಲಿಯೇ, ದುಡ್ಡು ಕೊಟ್ಟು ಆಡುವಂಥ ಎಲ್ಲ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಪಳನಿಸ್ವಾಮಿ ಆಶ್ವಾಸನೆ ನೀಡಿದ್ದರು. ಗೇಮಿಂಗ್, ಬೆಟ್ಟಿಂಗ್ ನಲ್ಲಿ ತೊಡಗಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಜೈಲಿಗೆ ಹಾಕಲಾಗುವುದು ಎಂದು ಆಗ ಹೇಳಿದ್ದರು.
ಆನ್ ಲೈನ್ ರಮ್ಮಿ ಮುಂತಾದ ಆಟಗಳ ಚಟದಿಂದ ಹಲವರು ಹಣ ಕಳೆದುಕೊಂಡಿದ್ದಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ನಂತರ ಈ ಬಗ್ಗೆ ಚಿಂತಿಸಲಾಗಿತ್ತು. ಆನ್ ಲೈನ್ ಜೂಜು ಪ್ರಚಾರ ಮಾಡುತ್ತಿದ್ದ ಸೆಲೆಬ್ರಿಟಿಗಳಿಗೂ ಮದ್ರಾಸ್ ಹೈ ಕೋರ್ಟ್ ನೋಟೀಸ್ ನೀಡಿತ್ತು. ಬಹುಭಾಷಾ ನಟ ಸುದೀಪ್, ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ನಟಿ ತಮನ್ನಾ ಭಾಟಿಯಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂತಾದವರಿಗೆ ನೋಟಿಸ್ ಜಾರಿ ಮಾಡಿತ್ತು.
ಆಂಧ್ರಪ್ರದೇಶದಲ್ಲಿ ಈಗಾಗಲೇ ಆನ್ ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಇದೀಗ ತಮಿಳುನಾಡು ಆನ್ ಲೈನ್ ಜೂಜಿನ ವಿರುದ್ಧ ಕಾಯ್ದೆಯನ್ನು ಇಂದು ಜಾರಿಗೊಳಿಸಿದೆ. ಕರ್ನಾಟಕದಲ್ಲಿಯೂ ಆನ್ ಲೈನ್ ಜೂಜನ್ನು ನಿಷೇಧಿಸಬೇಕೆಂಬ ಒತ್ತಾಯದ ಕೂಗು ಕೇಳಿಬರುತ್ತಿದೆ.












Click it and Unblock the Notifications