ಬೆಲೆ ಏರಿಕೆ ವ್ಯಂಗ್ಯ: ನವ ವಿವಾಹಿತರಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್
ಚೆನ್ನೈ, ಏಪ್ರಿಲ್ 08: ರಷ್ಯಾ- ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕವಾಗಿ ಇಂಧನ ದರ ಏರುಪೇರಾಗುತ್ತಿದೆ. ಭಾರತದಲ್ಲಿ ಸತತವಾಗಿ ಏರಿಕೆ ಕಾಣುತ್ತಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣದಿಂದ ಬೆಲೆ ಏರಿಕೆ ತಡೆ ಹಿಡಿಯಲಾಗಿತ್ತು. ಆದರೆ, ಈಗ ಬೆಲೆ ಪರಿಷ್ಕರಣೆಗೊಳ್ಳುತ್ತಿದ್ದು, ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100 ರು ದಾಟಿವೆ. ಈ ನಡುವೆ ತಮಿಳುನಾಡಿನ ಗ್ರಾಮವೊಂದರಲ್ಲಿ ನವವಿವಾಹಿತರಿಗೆ ಪೆಟ್ರೋಲ್, ಡೀಸೆಲ್ ಗಿಫ್ಟ್ ನೀಡಿದ್ದಾರೆ.
ಬೆಲೆ ಏರಿಕೆ ಬಗ್ಗೆ ಟ್ರಾಲ್, ಮೀಮ್ಸ್ ಬಂದಾಗ ಸಾಮಾಜಿಕ ಜಾಲ ತಾಣಗಳಲ್ಲಿ ಈ ರೀತಿ ಚಿತ್ರಗಳು ಸಾಮಾನ್ಯವಾಗಿ ಟ್ರೆಂಡ್ ಆಗುತ್ತವೆ. ಬೆಲೆ ಏರಿಕೆ ಬಗ್ಗೆ ವ್ಯಂಗ್ಯವಾಡಿ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಣಕವಾಡಲಾಗುತ್ತದೆ.
ತಮಿಳುನಾಡಿನ ಚೆಂಗಲ್ ಪಟ್ಟು ಜಿಲ್ಲೆಯ ಚೆಯ್ಯೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ತಮ್ಮ ಸ್ನೇಹಿತನಿಗೆ ಶುಭ ಕೋರಲು ಬಂದಿದ್ದ ಗೆಳೆಯರ ಗುಂಪೊಂದು ವಿಶಿಷ್ಟ ಗಿಫ್ಟ್ ನೀಡಿದೆ. ವೇದಿಕೆ ಏರಿದ ಗೆಳೆಯರು, ನವವಿವಾಹಿತರಿಗೆ ವಿಶ್ ಮಾಡಿದ ಬಳಿಕ, ಎರಡು ಬಾಟಲಿ ಪೆಟ್ರೋಲ್, ಡೀಸೆಲ್ ಹೊರ ತೆಗೆಯುತ್ತಿದ್ದಂತೆ ದಂಪತಿಗಳು ಹುಬ್ಬೇರಿಸಿ ತಮಗೆ ಸಿಗುತ್ತಿರುವ ಗಿಫ್ಟ್ ವೀಕ್ಷಿಸುತ್ತಾರೆ. ದಂಪತಿಗೆ ಇಂಧನ ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ ನೀಡಿ ಫೋಟೋಗೆ ಪೋಸ್ ನೀಡಿದ್ದಾರೆ. ನೋಡುತ್ತಿದ್ದಂತೆ ನಗೆ ಉಕ್ಕಿಸುವ ಈ ಚಿತ್ರವನ್ನು ಎಎನ್ಐ ಕೂಡಾ ಟ್ವೀಟ್ ಮಾಡಿದ್ದು, ಸಾರ್ವಜನಿಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 110.85 ರು ಇದ್ದರೆ, ಡೀಸೆಲ್ 100.94 ರು ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ. ಕಳೆದ 16 ದಿನಗಳಲ್ಲಿ 14 ದಿನಗಳ ಕಾಲ ಪೈಸೆಗಳ ಲೆಕ್ಕದಲ್ಲಿ ಇಂಧನ ದರ ಪರಿಷ್ಕರಣೆಯಾಗಿದೆ. ಸರಿ ಸುಮಾರು 9 ರಿಂದ 10 ರು ಬೆಲೆ ಏರಿಕೆ ಕಂಡಿದೆ. ನಾಲ್ಕು ತಿಂಗಳ ಕಾಲ ಬೆಲೆ ಪರಿಷ್ಕರಣೆ ಮಾಡದ ಸರ್ಕಾರಿ ಸ್ವಾಮ್ಯ ಮೂರು ತೈಲ ಕಂಪನಿಗಳು ಮಾರ್ಚ್ 22ರ ಬಳಿಕ ಪ್ರತಿ ದಿನ ಬೆಲೆ ಪರಿಷ್ಕರಿಸುತ್ತಿವೆ. ಫೆಬ್ರವರಿ ತಿಂಗಳಿನಿಂದ ಒಪೆಕ್ ರಾಷ್ಟ್ರಗಳಿಂದ ಇಂಧನ ಪೂರೈಕೆ ವ್ಯತ್ಯಯವಾಗಿದ್ದು, ಅತಿ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವ ಭಾರತಕ್ಕೂ ಬಿಸಿ ತಟ್ಟಿದೆ.
ಜಾಗತಿಕ ಕಚ್ಚಾತೈಲ ದರ, ಜಾಗತಿಕ ವಿದ್ಯಮಾನಗಳನ್ನು ಪರಿಶೀಲಿಸಿ ಪ್ರತಿ ದಿನ ಬೆಳಗ್ಗೆ 6 ಗಂಟೆ ಬಳಿಕ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಬೆಲೆ ಪರಿಷ್ಕರಣೆ ಮಾಡಿ ಪ್ರಕಟಿಸುತ್ತವೆ.












Click it and Unblock the Notifications