ರಜನಿ ಹೊಸ ರಾಜಕೀಯ ಪಕ್ಷದ ಉದಯಕ್ಕೆ ಮುಹೂರ್ತ ನಿಗದಿ
ಚೆನ್ನೈ, ಫೆಬ್ರವರಿ 09: ಸಿನಿಮಾ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಸೂಪರ್ ಸ್ಟಾರ್ ಬಿರುದಾಂಕಿತ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು ನೆನಪಿರಬಹುದು. ಪ್ರಧಾನಿ ಮೋದಿ ಹಾಗೂ ಅವರ ಅನೇಕ ಯೋಜನೆಗಳನ್ನು ಆಗಾಗ ಹೊಗಳುವ ರಜನಿ ಮುಂದಿನ ನಡೆ ಏನು ಎಂಬುದು ಭಾರಿ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ರಜನಿ ಅವರು ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ಗಳು ಈಗ ರಾಜಕೀಯ ರಂಗದಲ್ಲೂ ಒಟ್ಟಿಗೆ ಕೈಜೋಡಿಸಿ ತಮಿಳುನಾಡಿನ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂಬ ಸುದ್ದಿಯಿದೆ.
"ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದರು.

2021ರಲ್ಲಿ ತಮಿಳುನಾಡಿನ ಜನರೆ ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ರಜನಿ ಕಾಂತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿ ಅವರು ಈಗಾಗಲೇ ರಜಿನಿ ಮಕ್ಕಳ್ ಮಂಡ್ರಂ ಹೆಸರಿನ ರಾಜಕೀಯ ಸಂಘಟನೆ ಸ್ಥಾಪಿಸಿದ್ದಾರೆ. ಆದರೆ, ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಏಪ್ರಿಲ್ 14ರಂದು ಅಥವಾ ಅಷ್ಟರೊಳಗೆ ಘೋಷಿಸಲಾಗುತ್ತದೆ. ಪಕ್ಷದ ಹೆಸರು, ಧ್ಯೇಯೋದ್ದೇಶ, ಲಾಂಛನ ಇನ್ನಿತರ ವಿವರಗಳು ಇನ್ನು ಲಭ್ಯವಾಗಿಲ್ಲ.
ತಮಿಳ್ ಅರುವಿ ಮಣಿಯನ್ ಅವರು ರಾಜಕೀಯ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಪಕ್ಷದ ರೂಪುರೇಷೆ, ಉದ್ದೇಶ, ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಣಿಯನ್ ತಂತ್ರಗಾರಿಕೆ ರೂಪಿಸಲಿದ್ದಾರೆ. ರಜನಿ ಪಕ್ಷಕ್ಕೆ ಪಿಎಂಕೆ ಹಾಗೂ ಬಿಜೆಪಿ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯಿದೆ.












Click it and Unblock the Notifications