ಉಪ ಚುನಾವಣೆಯಲ್ಲಿ ಮತದಾರರಿಗೆ ಫ್ಲಿಪ್ ಕಾರ್ಟ್, ಅಮೆಜಾನ್ ಗಿಫ್ಟ್
ಜಯಲಲಿತಾ ನಿಧನದಿಂದ ತೆರವಾದ ಆರ್ ಕೆ ನಗರ್ ವಿಧಾನಸಭೆ ಕ್ಷೇತ್ರದಲ್ಲಿ ಹೊಸ ಬಗೆಯ ಚುನಾವಣೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಒ ಪನ್ನೀರ್ ಸೆಲ್ವಂ ಬಣದಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಚೆನ್ನೈ, ಏಪ್ರಿಲ್ 6: ಮತದಾರರಿಗೆ ಏನೆಲ್ಲ ಆಮಿಷ ತೋರಿಸ್ತಾರೆ ಅನ್ನೋದು ರಾಜಕಾರಣಿಗಳ ಬಗ್ಗೆ ಪ್ರಜ್ಞಾವಂತರ ಆರೋಪ. ಜಯಲಲಿತಾ ನಿಧನದಿಂದ ತೆರವಾದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಕ್ರಮ ಅನುಸರಿಸಿ ಮತದಾರರನ್ನು ಸೆಳೆಯಲಾಗುತ್ತಿದೆ ಎಂದು ಒ ಪನ್ನೀರ್ ಸೆಲ್ವಂ ಬಣ (ಪುರಚ್ಚಿ ತಲೈವಿ ಅಮ್ಮ) ಆರೋಪಿಸಿದೆ.
ಮತದಾರರನ್ನು ಸೆಳೆಯುವ ವಿಧಾನವೇ ಬದಲಾಗಿದೆ. ಆರ್ ಕೆ ನಗರ್ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದು ಕೂಡ ಮತದಾರರಿಗೆ ಆಮಿಷ ಒಡ್ಡಲು ಕ್ಯಾಶ್ ಲೆಸ್ ಆಗಿದೆಯಂತೆ. ಈಚೆಗೆ ಒಪಿಎಸ್ ಬಣ ಚುನಾವಣೆ ಆಯೋಗದ ಬಳಿ ಈ ಬಗ್ಗೆ ದೂರು ದಾಖಲಿಸಿದೆ. ಎಐಎಡಿಎಂಕೆ (ಅಮ್ಮ) ಶಶಿಕಲಾ ಬಣದವರು ಮತದಾರರಿಗೆ ಫ್ಲಿಪ್ ಕಾರ್ಟ್ ಹಾಗೂ ಅಮೇಜಾನ್ ನಂಥ ಇ-ರೀಟೆಲರ್ಸ್ ಕಂಪೆನಿಗಳಿಂದ ಗಿಫ್ಟ್ಸ್ ಖರೀದಿಸಿ ಹಂಚುತ್ತಿದ್ದಾರೆ ಎಂದು ದೂರಲಾಗಿದೆ.[ಜೈಲಿನಿಂದಲೇ ಶಶಿಕಲಾ ತ.ನಾಡು ಸರಕಾರ ನಡೆಸುತ್ತಿರುವುದು ಹೇಗೆ?]

"ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಿಂದ ದೊಡ್ಡ ಪ್ರಮಾಣದಲ್ಲಿ ಗಿಫ್ಟ್ಸ್ ಖರೀದಿಸಿ ತಿರುವೊಟ್ಟಿಯೂರಿನ ಎನ್ ಬಿಟಿ ಕ್ವಾರ್ಟರ್ಸ್ ಗೆ ಕಳಿಸಿದ್ದಾರೆ. ಆ ನಂತರ ಮತದಾರರಿಗೆ ಟೋಕನ್ ಗಳನ್ನು ಕೊಟ್ಟು ತಮ್ಮ ಉಡುಗೊರೆಯನ್ನು ಪಡೆಯುವಂತೆ ಸೂಚಿಸುತ್ತಿದ್ದಾರೆ" ಎಂದು ಮಾಜಿ ಶಾಸಕ ಮನೋಜ್ ಪಾಂಡಿಯನ್ 'ದ ನ್ಯೂಸ್ ಮಿನಿಟ್'ಗೆ ಮಾಹಿತಿ ನೀಡಿದ್ದಾರೆ.

ಅಂದಹಾಗೆ, ತಿರುವೊಟ್ಟಿಯೂರು ಆರ್ ಕೆ ನಗರ್ ವ್ಯಾಪ್ತಿಗೆ ಬರುವುದಿಲ್ಲ. ಅದು ಚೆನ್ನೈ ಉತ್ತರಕ್ಕೆ ಸೇರುತ್ತದೆ. "ನಮ್ಮ ಬಣದವರು ಈ ತಂತ್ರವನ್ನು ಪತ್ತೆ ಹಚ್ಚಿದ್ದಾರೆ. ಈಗಲೂ ಉಡುಗೊರೆ ಹಂಚುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹಾಗೆ ಸಾಕ್ಷ್ಯಗಳನ್ನು ಚುನಾವಣೆ ಆಯೋಗಕ್ಕೆ ಒದಗಿಸಲಾಗಿದೆ" ಎಂದು ಪಾಂಡಿಯನ್ ಹೇಳಿದ್ದಾರೆ.[ಜಯಲಲಿತಾ ಕ್ಷೇತ್ರದ ಚುನಾವಣೆ: ಪನ್ನೀರ್ ಸೆಲ್ವಂ ಪ್ರತ್ಯೇಕ ರಣತಂತ್ರ]

"ಅಪರಾಧ ಹಿನ್ನೆಲೆಯ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ ಮತದಾರರಿಗೆ ಆಮಿಷ ಒಡ್ಡಲು ಹೊಸ ಮಾರ್ಗ ಹಾಗೂ ವೈಜ್ಞಾನಿಕ ವಿಧಾನಗಳನ್ನು ಹುಡುಕಿಕೊಳ್ತಾರೆ" ಎಂದು ಶಶಿಕಲಾ ಬಣದ ಅಭ್ಯರ್ಥಿ ದಿನಕರನ್ ವಿರುದ್ಧ ಪಾಂಡಿಯನ್ ಆರೋಪ ಮಾಡಿದ್ದಾರೆ. ಅಂದಹಾಗೆ ಚುನಾವಣೆ ಆಯೋಗಕ್ಕೆ ಒಪಿಎಸ್ ಬಣ ನೀಡಿದ ದೂರಿನಲ್ಲಿ ಏನಿದೆ ಗೊತ್ತಾ?

"ಆರ್ ಕೆ ನಗರದ ಪ್ರತಿ ಮತದಾರನಿಗೆ ತಲಾ 4 ಸಾವಿರ ರುಪಾಯಿಯನ್ನು ಬುಧವಾರ ಬೆಳಗ್ಗೆ 3ರಿಂದ 7 ಗಂಟೆಯೊಳಗೆ ಹಂಚಿದ್ದಾರೆ. ಈ ವರೆಗೆ ದಿನಕರನ್ ಉಪ ಚುನಾವಣೆಗಾಗಿ 80 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ" ಎಂದು ಪಾಂಡಿಯನ್ ಆರೋಪಿಸಿದ್ದಾರೆ.[25 ಕೋಟಿ ದಂಡ ಹಾಕಿಸಿಕೊಂಡ ದಿನಕರನ್ AIADMK ಆರ್ ಕೆ ನಗರ್ ಅಭ್ಯರ್ಥಿ!]

ತಮಿಳುನಾಡಿನಲ್ಲಿ ಮತದಾರರಿಗೆ ಈ ಹಿಂದೆ ಕೂಡ ನಾನಾ ವಿಧದ ಆಮಿಷ ತೋರಿಸಲಾಗಿದೆ. ಟಿವಿ, ಎಲೆಕ್ಟ್ರಾನಿಕ್ ವಸ್ತುಗಳು, ಅಡುಗೆ ಮನೆಯ ವಸ್ತುಗಳು, ಚಿನ್ನದ ಉಂಗುರ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತದಾರರಿ ಸಾಲ ಮಾಡಿದ್ದರೆ ಅದನ್ನು ತೀರಿಸುವ ಮೂಲಕ ಮತ ಸೆಳೆಯಲು ಯತ್ನಿಸಿದ ಉದಾಹರಣೆಗಳಿವೆ.












Click it and Unblock the Notifications