ಎಐಎಡಿಎಂಕೆಯಲ್ಲಿ ಸಣ್ಣ ಬಿರುಕನ್ನೂ ಮೂಡಿಸಲು ಸಾಧ್ಯವಿಲ್ಲ; ಪಳನಿಸ್ವಾಮಿ
ಚೆನ್ನೈ, ಫೆಬ್ರುವರಿ 11: "ಎಐಎಡಿಎಂಕೆ ಪಕ್ಷ ಒಡೆಯಲು ಕೆಲವರು ಸಂಚು ಮಾಡುತ್ತಿದ್ದಾರೆ. ಆದರೆ ಆ ನಿಮ್ಮ ಕನಸು ನನಸಾಗುವುದಿಲ್ಲ" ಎಂದು ಅಮ್ಮ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖಂಡ ಟಿಟಿವಿ ದಿನಕರನ್ ಉದ್ದೇಶಿಸಿ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದೇ ಏಪ್ರಿಲ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ತಮಿಳುನಾಡು ಚುನಾವಣೆಗೆ ಸಜ್ಜಾಗುತ್ತಿದೆ. ಶಶಿಕಲಾ ನಟರಾಜನ್ ತಮಿಳುನಾಡಿಗೆ ಮರಳಿದ ನಂತರ ರಾಜ್ಯ ರಾಜಕೀಯದಲ್ಲಿ ಏರಿಳಿತ ಆರಂಭವಾಗಿದೆ. ಈ ನಡುವೆ ಪ್ರಚಾರ ಕಾರ್ಯವೂ ಬಿರುಸು ಪಡೆದುಕೊಂಡಿದೆ. ಬುಧವಾರ ಕೃಷ್ಣಗಿರಿಯಲ್ಲಿ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಸಿಎಂ ಪಳನಿಸ್ವಾಮಿ ಟಿಟಿವಿ ದಿನಕರನ್ ವಿರುದ್ಧ ಮಾತನಾಡಿದ್ದಾರೆ.
"ಕೆಲವರು ಪಕ್ಷದ ಮೇಲೆ ಹಿಡಿತ ಸಾಧಿಸಲು ಸಂಚು ಹೂಡಿದ್ದಾರೆ. ಆದರೆ ಆಡಳಿತ ಪಕ್ಷದ ಕಾರ್ಯಕರ್ತರು ಈ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ. ಕಾರ್ಮಿಕ ಪ್ರಾಬಲ್ಯವಿರುವ ಈ ಪಕ್ಷ ಎಂದಿಗೂ ಒಗ್ಗಟ್ಟಿನಿಂದ ಉಳಿಯುತ್ತದೆ. ಎಐಎಡಿಎಂಕೆ ಒಂದೇ ಕುಟುಂಬದ ಆಡಳಿತವನ್ನು ಒಪ್ಪಿಕೊಳ್ಳುವುದಿಲ್ಲ" ಎಂದಿದ್ದಾರೆ.

"ಪಕ್ಷದಲ್ಲಿ ಸಣ್ಣ ಬಿರುಕು ಮೂಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದಿರುವ ಅವರು, ಪಕ್ಷ ನಿಷ್ಠಾವಂತ, ಪರಿಶ್ರಮಿಗಳಿಗೆ ಮಾತ್ರ ಸ್ಥಾನ ನೀಡಿದೆ. ಅಂತಹ ಗುಣಲಕ್ಷಣವಿರುವ ಯಾವ ಕೆಲಸಗಾರರೂ ಮುಖ್ಯಮಂತ್ರಿಯಾಗಬಹುದು" ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications