ಚೆನ್ನೈ: ಯುಪಿಎ ನಿಧಿ ಶೋಧ ಅಣಕಿಸಿದ ಮೋದಿ
ಚೆನ್ನೈ, ಅ.18: ಭಾರತದಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ. ಯುವಕರೇ ನಿಮ್ಮಂದ ಎಲ್ಲವೂ ಸಾಧ್ಯವಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯುಪಿಎ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಒಡಿಶಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ಫೈಲಿನ್ ಹೆಚ್ಚಿನ ನಾಶನಷ್ಟವನ್ನುಂಟುಮಾಡದೆ ಹೋಯಿತು. ಆದರೆ ದೇಶದಲ್ಲಿ ಬೀಸಲಿರುವ ಬದಲಾವಣೆಯ ಚಂಡಮಾರುತದ ಮುಂದೆ ಯಾರೂ ನಿಲ್ಲಲಾರರು.
ಬದಲಾವಣೆಯ ಚಂಡ ಮಾರುತ ಬೀಸಲು ಸಿದ್ಧತೆಯಾಗುತ್ತಿರುವ ಕಾರಣವೇ ಫೈಲಿನ್ ಚಂಡ ಮಾರುತ ಬೇಗನೆ ಹೊರಟು ಹೋಯಿತು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ನಿಧಿ ಶೋಧ ಬಗ್ಗೆ : ಕೇಂದ್ರ ಸರ್ಕಾರ ಕಪ್ಪು ಹಣ ಪ್ರಕರಣವನ್ನು ಬದಿಗಿಟ್ಟು ಇದೀಗ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ 1000 ಟನ್ ಸ್ವರ್ಣ ನಿಧಿಯಿದೆ ಎಂಬ ಸಾಧುವೊಬ್ಬರ ಕನಸನ್ನು ಬೆನ್ನತ್ತಿ ನಿಧಿಶೋಧಕ್ಕೆ ತೊಡಗಿದೆ.
ಯಾರೋ ಒಬ್ಬ ಕನಸು ಕಂಡಿದ್ದಾನೆ ಎಂದು ಸರ್ಕಾರ ನಿಧಿ ಶೋಧಕ್ಕೆ ತೊಡಗಿರುವುದನ್ನು ನೋಡಿ ಜಗತ್ತು ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಸ್ವಿಸ್ ಬ್ಯಾಂಕ್ ನಲ್ಲಿಟ್ಟಿರುವ ಕಪ್ಪು ಹಣ 1000 ಟನ್ ಚಿನ್ನಕ್ಕಿಂತೂ ಅಧಿಕವಿದೆ, ಅದನ್ನು ಮೊದಲು ವಾಪಸ್ ತರಲಿ. ಯುಪಿಎ ಸರ್ಕಾರ ಅದನ್ನು ವಾಪಸ್ ತಂದರೆ ದೇಶಕ್ಕೆ ಯಾವುದೇ ಆರ್ಥಿಕ ಸಂಕಷ್ಟಗಳು ಇರಲಾರದು ಎಂದು ಮೋದಿ ಹೇಳಿದ್ದಾರೆ.
ಅದೇ ವೇಳೆ ಮುಂದಿನ ಬಿಜೆಪಿ ಸರ್ಕಾರ ತಮಿಳ್ನಾಡಿನ ಜನರ ಆಸೆಗಳನ್ನು ಪೂರೈಸಲಿದೆ ಎಂದು ಮೋದಿ ತಮಿಳ್ನಾಡಿನ ಜನರಿಗೆ ಭರವಸೆ ನೀಡಿದ್ದಾರೆ. ತಿರುಚ್ಚಿಯಲ್ಲಿ ನಡೆದ ಸಮಾರಂಭ ಮುಗಿದ ನಂತರ ಮೋದಿಯವರು ಇಂದು ಸಂಜೆ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಭೇಟಿ ಮಾಡಲಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸಂಜೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.