ಕೆ. ಅಣ್ಣಾಮಲೈ ಪರವಾಗಿ ಮುನಿರತ್ನ ಭರ್ಜರಿ ಪ್ರಚಾರ
ಚೆನ್ನೈ, ಮಾರ್ಚ್ 17; ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಕಣ ರಂಗೇರಿದೆ. ಏಪ್ರಿಲ್ 6ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಬುಧವಾರ ಅವರು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಪಲ್ಲಪಟ್ಟಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಬಿಜೆಪಿ ಅಭ್ಯರ್ಥಿ ಕೆ.ಅಣ್ಣಾಮಲೈ ಪರವಾಗಿ ಮತ ಯಾಚಿಸಿದರು.

ಕರ್ನಾಟಕ ಕೆಡರ್‌ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಪಕ್ಷ ಸೇರಿದ್ದಾರೆ. ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾದ ಅವರಿಗೆ ಕರೂರು ಜಿಲ್ಲೆಯ ಅರವಾಕುರುಚಿ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.
ಅರವಾಕುರುಚಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನರೇ ಹೆಚ್ಚಾಗಿದ್ದಾರೆ. ಮುನಿರತ್ನ ಅವರಿಗೆ ಪಕ್ಷ ಕೆ. ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸುವ ಜವಾಬ್ದಾರಿಯನ್ನು ನೀಡಿದೆ. ಅಣ್ಣಾಮಲೈ ಅವರನ್ನು ಚುನಾಯಿಸಬೇಕು ಎಂದು ಮುನಿರತ್ನ ಮನವಿ ಮಾಡುತ್ತಿದ್ದಾರೆ.

"ಕೆ.ಅಣ್ಣಾಮಲೈ ಅವರಿಗೆ ಕರ್ನಾಟಕದ ನಂಟಿದೆ. ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ ಸೇವೆಯನ್ನು ನಮ್ಮ ರಾಜ್ಯದ ಜನರೂ ಎಂದಿಗೂ ಮೆರೆಯುವುದಿಲ್ಲ" ಎಂದು ಮುನಿರತ್ನ ಅವರು ಹೇಳಿದರು.
ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಸಹ ಗೆದ್ದಿರಲಿಲ್ಲ. ಈ ಬಾರಿ ಎನ್‌ಡಿಎ ಮೈತ್ರಿಕೂಟ ಗೆಲುವಿನ ನಿರೀಕ್ಷೆಯಲ್ಲಿದೆ.












Click it and Unblock the Notifications