ವ್ಯರ್ಥವಾದ ರಾಜನಾಥ್ ಶ್ರಮ, ಎನ್ಡಿಎ ತೊರೆದ ವೈಕೋ!
ನವದೆಹಲಿ/ಚೆನ್ನೈ, ಡಿ.8: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಎನ್ ಡಿಎ ಮಿತ್ರಪಕ್ಷಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದ ರಾಜನಾಥ್ ಸಿಂಗ್ ಅವರ ಶ್ರಮ ವ್ಯರ್ಥವಾಗಿದೆ. ವೈಕೋ ನೇತೃತ್ವದ ಎಂಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ.
ಎಂಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬರುವ ನಿರ್ಣಯ ಕೈಗೊಂಡಿದೆ. ಅಲ್ಲದೆ ಭಾರತ, ಶ್ರೀಲಂಕಾಗೆ ಬೆಂಬಲ ನೀಡಬಾರದು. ರಾಜಪಕ್ಸೆ ಅವರು ತಮಿಳು ಮೀನುಗಾರರ ಬಿಡುಗಡೆ ನಾಟಕವಾಡಿದ್ದಾರೆ ಎಂದು ಒತ್ತಾಯಿಸಿದೆ. ಪಕ್ಷದ ಮುಖ್ಯಸ್ಥ ವೈಕೋ ಅವರು ನಿರ್ಣಯವನ್ನು ಮಂಡಿಸಿದ್ದಾರೆ.
ಕೇಂದ್ರ ಸರ್ಕಾರ ತಮಿಳು ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ತಮಿಳರಿಗೆ ಮೋಸ ಮಾಡಿದೆ. ಎಂದು ವೈಕೋ ಅವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮಹಿಂದ್ ರಾಜಪಕ್ಸೆ ಜೊತೆ ಕಾಣಿಸಿಕೊಂಡಾಗಲೆಲ್ಲಾ ಎಲ್‌ಟಿಟಿಇ ಬೆಂಬಲಿಸುವ ವೈಕೋ ಅವರು ಅವರು ಕಿಡಿಕಾರುತ್ತಿದ್ದರು. ರಾಜಪಕ್ಸೆ ಅವರಿಗೆ ಭಾರತ ರತ್ನ ಕೊಡಿ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಹೇಳಿಕೆ ನೀಡಿದರೂ ಮೋದಿ ಖಂಡಿಸಿಲ್ಲ. ಮೋದಿ ಸರ್ಕಾರ ಶಿಕ್ಷಣವನ್ನು ಸಂಸ್ಕೃತಮಯ ಮಾಡುತ್ತಿದೆ.
ಬಾನುಲಿಗಳಲ್ಲಿ ಹಿಂದಿ ಹೇರಿಕೆ ನಿರಂತರವಾಗಿ ನಡೆದಿದೆ. ಮುಲ್ಲೈ ಪೆರಿಯಾರ್ ನದಿ ನೀರು ಹಂಚಿಕೆ ವಿವಾದ ನೆನಗುದಿಗೆ ಬಿದ್ದಿದೆ.ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯದಿದ್ದರೂ ಇಂಥ ಯೋಜನೆಗೆ ಹೇಗೆ ಅನುಮತಿ ಸಿಗುತ್ತದೆ ಎಂದು ವೈಕೋ ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಬಲ ಪಡಿಸಲು ರಾಜನಾಥ್ ಸಿಂಗ್ ಅವರು ಯತ್ನಿಸಿದ್ದರು. ಎಂಡಿಎಂಕೆ ಸೇರಿದಂತೆ ಆರು ಪಕ್ಷಗಳು ಎನ್ ಡಿಎ ಸೇರಿದ್ದವು. 39 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಂಡಿಎಂಕೆ ಒಂದರಲ್ಲೂ ಗೆದ್ದಿರಲಿಲ್ಲ. ಬಿಜೆಪಿ ಹಾಗೂ ಪಿಎಂಕೆ ತಲಾ ಒಂದು ಸೀಟು ಗೆದ್ದಿದ್ದಷ್ಟೇ ಸಾಧನೆಯಾಗಿತ್ತು.












Click it and Unblock the Notifications