ಮದುವೆ ದಿನವೇ ವಧು ಹತ್ಯೆ, ವರ ಆತ್ಮಹತ್ಯೆಗೆ ಶರಣು!
ಚೆನ್ನೈ, ಜೂನ್ 12 : ಮದುವೆಯಾದ ದಿನವೇ ವಧುವನ್ನು ಹತ್ಯೆ ಮಾಡಿ ವರ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ನಡೆಸುತ್ತಿದ್ದಾರೆ.
Recommended Video
ಸಂಧ್ಯಾ (22) ಹತ್ಯೆ ಮಾಡಿರುವ ಪತಿ ನೇತಿ ವಾಸನ್ (28) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಘಟನೆಯಿಂದಾಗಿ ತಿರುವಳ್ಳೂರು ಸಮೀಪದ ಪೊನ್ನೇರಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಒಂದು ವರ್ಷದ ಹಿಂದೆ ಸಂಧ್ಯಾ ಮತ್ತು ನೇತಿ ವಾಸನ್ ನಿಶ್ಚಿತಾರ್ಥ ನಡೆದಿತ್ತು. ಮಾರ್ಚ್‌ನಲ್ಲಿ ನಡೆಯಬೇಕಿದ್ದ ವಿವಾಹವನ್ನು ಲಾಕ್ ಡೌನ್ ಕಾರಣ ಜೂನ್‌ಗೆ ಮುಂದೂಡಲಾಗಿತ್ತು. ಬುಧವಾರ ಸ್ಥಳೀಯ ದೇವಾಲಯದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹ ನಡೆದಿತ್ತು.

ರಾತ್ರಿ 10.30ರ ಸುಮಾರಿಗೆ ನೇತಿ ವಾಸನ್ ಮನೆಯಿಂದ ಹೊರಗೆ ಓಡಿದ್ದಾನೆ. ಗಾಬರಿಗೊಂಡ ಮನೆಯವರು ರೂಂನಲ್ಲಿ ಪರಿಶೀಲಿಸಿದಾಗ ಸಂಧ್ಯಾ ರಕ್ತದ ಮಡುವಿನಲ್ಲಿದ್ದಳು, ಆಕೆಯನ್ನು ಹತ್ಯೆ ಮಾಡಲಾಗಿತ್ತು.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೇತಿ ವಾಸನ್‌ಗಾಗಿ ಹುಡುಕಾಟ ನಡೆಸಿದರು. ಗುರುವಾರ ಬೆಳಗ್ಗೆ ಊರಿನ ಹೊರವಲಯದ ಮರದಲ್ಲಿ ಆತನ ಶವ ಪತ್ತೆಯಾಗಿದೆ. ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.












Click it and Unblock the Notifications