ನಟ ರಜನಿಕಾಂತ್ ಗೆ ಹೈಕೋರ್ಟಿನಿಂದ ನೋಟಿಸ್
ಚೆನ್ನೈ, ನ.13: ತಮಿಳುನಾಡು ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಗೆ ಮುನ್ನ ಭಾರಿ ವಿವಾದ ಎಬ್ಬಿಸಿದ್ದ ವಿಜಯ್ ಅಭಿನಯದ 'ಕತ್ತಿ' ಚಿತ್ರ ನಂತರ ರಜನಿಕಾಂತ್ ಅವರ 'ಲಿಂಗಾ' ವಿಘ್ನ ಎದುರಾಗಿದೆ.
ಲಿಂಗಾ ಚಿತ್ರದ ಕಥೆ ಕದಿಯಲಾಗಿದೆ ಎಂದು ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ. ವಿವಾದ ಈಗ ಕೋರ್ಟ್ ಮೆಟ್ಟಿಲೇರಿದ್ದು, ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಂ. ವೇಣುಗೋಪಾಲ್ ದೂರು ಸ್ವೀಕರಿಸಿ ನಟ ರಜನಿಕಾಂತ್ ಹಾಗೂ ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರಕಥೆಗಾರ ಬಿ ಪೊನ್ನುಕುಮಾರ್, ನಿರ್ದೇಶಕ ಕೆಎಸ್ ರವಿಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಆದರೆ, ಚಿತ್ರ ಬಿಡುಗಡೆಗೆ ನಿರ್ಬಂಧ ಹೇರುವ ಬಗ್ಗೆ ಮಧ್ಯಂತರ ಆದೇಶ ನೀಡಲು ಕೋರ್ಟ್ ನಿರಾಕರಿಸಿದೆ. ನೋಟಿಸ್ ಗೆ ಉತ್ತರಿಸಲು ಮೇಲ್ಕಂಡವರಿಗೆ ನವೆಂಬರ್ 19ರ ತನಕ ಅವಕಾಶ ನೀಡಲಾಗಿದೆ. ಭಾನುವಾರದ ದಿನ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಿದೆ.
ರಜನಿಗೆ ಏಕೆ ನೋಟಿಸ್: ಚಿತ್ರದ ಹೀರೋ ಆದ ಮಾತ್ರಕ್ಕೆ ರಜನಿ ನೋಟಿಸ್ ನೀಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ, ಅರ್ಜಿದಾರ ಕೆ.ಆರ್ ರವಿ ರತ್ನಂ ಅವರ ಪರವಾಗಿ ವಾದಿಸಿದ ಪೀಟರ್ ರಮೇಶ್ ಕುಮಾರ್ ಅವರು ಮಾತನಾಡಿ, ರಜನಿಕಾಂತ್ ಅವರು ಚಿತ್ರಕ್ಕೆ ಕಥೆ ಒದಗಿಸುವಲ್ಲಿ ಯಾವುದೇ ಪಾತ್ರವಹಿಸಿಲ್ಲ ನಿಜ, ಅದರೆ, ಚಿತ್ರದ ವಿತರಣೆ ಹಕ್ಕು ಇನ್ನಿತರ ರೀತಿಯಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ದೂರಿನಲ್ಲಿ ರಜನಿ ಅವರ ಹೆಸರು ಸೇರಿಸಲಾಗಿದೆ ಎಂದಿದ್ದಾರೆ. ['ಲಿಂಗಾ' ಚೂಟಿ ಫಸ್ಟ್ ಲುಕ್]
ಚಿತ್ರದ ಕಥೆ ಏನು?: ತಮಿಳುನಾಡು ಹೌಸಿಂಗ್ ಬೋರ್ಡಿನ ಅರ್ಜಿದಾರ ರವಿ ರತ್ನಂ ಪ್ರಕಾರ ಲಿಂಗಾ ಚಿತ್ರದ ಕಥೆಯನ್ನು ಅವರೆ ಬರೆದಿದ್ದಂತೆ. ಮುಲ್ಲೈ ವಾನಂ 999 ಎಂಬ ಮುಲ್ಲಪೆರಿಯಾರ್ ಅಣೆಕಟ್ಟು ಕುರಿತ ಚಿತ್ರ ಬಗ್ಗೆ ಜಾನ್ ಪೆನ್ನಿಕ್ಯೂಕ್ ಬರೆದಿರುವ ಲೇಖನ ಆಧಾರಿಸಿ ಚಿತ್ರ ಮಾಡಲು ಹೊರಟಾಗ ಈ ಕಥೆ ಬರೆದಿದ್ದರಂತೆ.
ಅದರೆ ಲಿಂಗಾ ಚಿತ್ರತಂಡ ಈ ಕಥೆಯನ್ನು ಕದ್ದು ಚಿತ್ರ ಮಾಡಿದೆ. ಚಿತ್ರದ ಟ್ರೇಲರ್ ವಿಡಿಯೋ ನೋಡಿದಾಗ ನನಗೆ ಚಿತ್ರಕಥೆ ನಕಲು ಮಾಡಿರುವ ವಿಷಯ ತಿಳಿಯಿತು ಹೀಗಾಗಿ ನಾನು ದೂರು ಸಲ್ಲಿಸಿದೆ ಎಂದಿದ್ದಾರೆ. [ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ]
ಇತ್ತೀಚೆಗೆ ಕತ್ತಿ ಚಿತ್ರ ಕೂಡಾ ಇದೇ ರೀತಿ ತೊಂದರೆಗೆ ಸಿಲುಕಿತ್ತು. ಗೋಪಿ ಎಂಬುವರು ಕತ್ತಿ ನಿರ್ದೇಶಕರ ಮೇಲೆ ಕಥೆ ಕದ್ದ ಆರೋಪ ಮಾಡಿದ್ದರು. ಅದರೆ, ನಂತರ ದೂರು ಹಿಂಪಡೆದುಕೊಂಡಿದ್ದರು. ಈಗ ಲಿಂಗಾ ಕಥೆ ಏನಾಗುವುದೋ ಕಾದು ನೋಡಬೇಕಿದೆ.