ಜಯಲಲಿತಾ ಆಸ್ಪತ್ರೆಯಲ್ಲಿದ್ದರೆ ಪಕ್ಷ, ಆಡಳಿತದ ಸ್ಥಿತಿ ಏನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 14: ಅತಿಸಾರ, ಜ್ವರ ಎಂಬ ಕಾರಣಕ್ಕೆ ಸೆಪ್ಟೆಂಬರ್ 23ರಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೇರಿದರು. ಈಗಾಗಲೇ ಇಪ್ಪತ್ತೊಂದು ದಿನ ಕಳೆದಿದೆ. ಆಕೆಯ ಫೋಟೋ, ವಿಡಿಯೋ ಯಾವುದೇ ಬಿಡುಗಡೆ ಆಗಿಲ್ಲ.

ಅವರು ಹೀಗೆ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚು ದಿನ ಇದ್ದರೆ ಎಐಎಡಿಎಂಕೆ ಒಗ್ಗಟ್ಟಾಗಿ ಉಳಿಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಆ ಪಕ್ಷದ ಪ್ರಶ್ನಾತೀತ ನಾಯಕಿ ಜಯಲಲಿತಾ. ಇಡೀ ಭಾರತಕ್ಕೆ ಪರಿಚಯವಿರುವ ಆ ಪಕ್ಷದ ಏಕೈಕ ತಾರಾ ವರ್ಚಸ್ಸಿನವರು ಜಯಲಲಿತಾ.[ಜಯಲಲಿತಾ ಆರೋಗ್ಯ ಮಾಹಿತಿಗಾಗಿ ಹೈಕೋರ್ಟ್ ಗೆ ಪಿಐಎಲ್]

ವಂಶಾಡಳಿತ ಇಲ್ಲ: ಆಕೆಗೆ ಇರುವಂಥ ಚರಿಷ್ಮಾ, ಬೆಂಬಲ ಆ ಪಕ್ಷದಲ್ಲಿ ಉಳಿದ ಯಾರಿಗೂ ಇಲ್ಲ. ಜತೆಗೆ ಆ ಪಕ್ಷದಲ್ಲಿ ವಂಶಾಡಳಿತ ಇಲ್ಲ. ಇನ್ನು ಜಯಲಲಿತಾ ಅವರಿಗೂ ಆ ರೀತಿಯ ವಾರಸುದಾರರೂ ಇಲ್ಲ. ಇದೀಗ ಆ ಪಕ್ಷದಲ್ಲೊಂದು ಅನಿಶ್ಚಿತತೆ ಕಾಣಿಸಿಕೊಂಡಿದೆ. ಈಚೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Pannerselvam-Jayalalithaa

ಈ ಭೇಟಿಗೆ ರಾಜಕೀಯ ಬಣ್ಣ ಕೊಡಬೇಡಿ, ಇದು ಸೌಜನ್ಯದ ಭೇಟಿ ಅಷ್ಟೇ ಅಂತಲೇ ಎಲ್ಲರೂ ಹೇಳಿದ್ದಾರೆ. ಇನ್ನು ಯಾವಾಗೆಲ್ಲ ಜಯಲಲಿತಾ ಅವರು ಮುಖ್ಯಮಂತ್ರಿ ಗಾದಿಯಲ್ಲಿ ಕೂರಲು ಸಾಧ್ಯವಾಗಿಲ್ಲವೋ ಆಗೆಲ್ಲ ಆ ಸ್ಥಾನದಲ್ಲಿ ಆಜ್ಞಾನುವರ್ತಿಯಾಗಿ ಕೂತಿದ್ದವರು ಓ.ಪನ್ನೀರ್ ಸೆಲ್ವಂ. ಸದ್ಯಕ್ಕೆ ಕೂಡ ಜಯಲಲಿತಾ ಅವರ ಖಾತೆಗಳನ್ನು ನಿರ್ವಹಿಸುತ್ತಿರುವುದು ಇದೇ ವ್ಯಕ್ತಿ.[ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ]

ತಾತ್ಕಾಲಿಕ ಅಷ್ಟೇ: ಪನ್ನೀರ್ ಸೆಲ್ವಂ ಅವರು ಜಯಲಲಿತಾ ಉತ್ತರಾಧಿಕಾರಿಯಾಗಲು ಸಾಧ್ಯವೇ ಇಲ್ಲ. ಕೆಲ ಕಾಲ ಆಕೆ ಸ್ಥಾನದಲ್ಲಿ ಕೂರಬಹುದು ಅಷ್ಟೇ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ರಾಜಕೀಯ ತಂತ್ರಜ್ಞ ಡಾ.ಸಂದೀಪ್ ಶಾಸ್ತ್ರಿ ಅವರು ಒನ್ ಇಂಡಿಯಾ ಜತೆ ಮಾತನಾಡಿ, ವ್ಯವಸ್ಥೆ ಮೇಲೆ ಜಯಲಲಿತಾ ಅವರಿಗೆ ಎಷ್ಟು ಕಾಲ ಹತೋಟಿ ಇರಲು ಸಾಧ್ಯ? ಜನರಿಗೆ ಆಕೆ ಸಂಪರ್ಕ ಸಾಧ್ಯವಾಗ್ತಿಲ್ಲ. ಆಡಳಿತ ವ್ಯವಸ್ಥೆ ಯಾರು ನೋಡಬೇಕು ಎಂಬುದು ಈಗಿನ ಪ್ರಶ್ನೆ ಎಂದಿದ್ದಾರೆ.

ಜಯಲಲಿತಾ ಅವರು ನೋಡಿಕೊಳ್ಳುತ್ತಿದ್ದ ಖಾತೆಯನ್ನು ಪನ್ನೀರ್ ಸೆಲ್ವಂಗೆ ವಹಿಸಿ, ರಾಜ್ಯಪಾಲರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಕೆಲಸ ನಿರ್ವಹಿಸಲು ಅಡ್ಡಿಯಾಗಿರುವ ಅನಾರೋಗ್ಯ, ಅಸಮರ್ಥತೆ ಜಯಲಲಿತಾ ಅವರಿಗೆ ತಾತ್ಕಾಲಿಕವಾಗಿರಬಹುದು. ಆದರೆ ಇದು ತುಂಬ ಕಾಲ ಮುಂದುವರಿದರೆ ರಾಜ್ಯದ ಆಡಳಿತ ವ್ಯವಸ್ಥೆ ನೋಡೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎನ್ನುತ್ತಾರೆ ಶಾಸ್ತ್ರಿ.[ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ: ಸುಬ್ರಮಣಿಯನ್ ಸ್ವಾಮಿ ಪತ್ರ]

ಇದೇ ಸ್ಥಿತಿ ಮುಂದುವರಿದರೆ ಒಬ್ಬರು ಯಾರಾದರೂ ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಾಗುತ್ತದೆ. ಅಂಥ ಸನ್ನಿವೇಶದಲ್ಲಿ ತಮಿಳುನಾಡಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರಾಜ್ಯಪಾಲರು ಬೇಕು. ಕೇಂದ್ರ ಸರಕಾರ ಸದ್ಯದಲ್ಲೇ ರಾಜ್ಯಪಾಲರ ನೇಮಕ ಮಾಡುತ್ತದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಹಾಗಾದರೆ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲು ಕೇಂದ್ರಕ್ಕೂ ಸಾಧ್ಯವಾಗುತ್ತದೆ ಎನ್ನುತ್ತಾರೆ ಡಾ.ಸಂದೀಪ್ ಶಾಸ್ತ್ರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If Tamil Nadu Chief Minister J Jayalalithaa's illness prolongs beyond a reasonable time, the big question is will the AIADMK remain united. People do not have access to her, questions are being raised as to who controls the system.
Please Wait while comments are loading...