ಜಯಲಲಿತಾ ಪ್ರಧಾನಿಯಾಗಲಿ ಅಂದ್ರು ದೇವೇಗೌಡ!
ಚೆನ್ನೈ, ಡಿ.14 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ, ಅವರ ಪಕ್ಷ ಸಹ ಜಯಲಲಿತಾ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಲು ಶ್ರಮವಹಿಸಿ ಕೆಲಸ ಮಾಡುವ ಶಕ್ತಿ ಹೊಂದಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ಶ್ರೀರಂಗಂನಲ್ಲಿ ಕಾಮರಾಜ್ ಫೌಂಡೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ದಕ್ಷಿಣ ಭಾರತದ ವ್ಯಕ್ತಿಯೊಬ್ಬರು ಪ್ರಧಾನಿಯಾಗುವುದನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ. ನಮ್ಮ ಪಕ್ಷ ಸಹ ಅವರಿಗೆ ಬೆಂಬಲ ನೀಡುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಐಎಡಿಎಂಕೆ ಪಕ್ಷವನ್ನು ಮುಕ್ತ ಕಂಠದಿಂದ ಶ್ಲಾಘಿಷಿದ ಗೌಡರು, ಜಯಲಲಿತಾ ಅವರು ಪ್ರಧಾನಿ ಪಟ್ಟಕ್ಕೆ ಏರುವುದಾದದರೆ, ನಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಹೇಳಿದರು. ದೇವರಲ್ಲಿ ನನಗೆ ನಂಬಿಕೆ ಇದ್ದು, ಶ್ರೀರಂಗಂನಲ್ಲಿ ನಾನು ಹೇಳುವ ಮಾತು ಸತ್ಯವಾಗಲಿದೆ ಎಂದು ಗೌಡರು ಭವಿಷ್ಯ ನುಡಿದರು.
ಮುಂದಿನ ಲೋಕಸಭೆ ಚುನಾಣೆಯಲ್ಲಿ ತೃತೀಯ ರಂಗ ಹೆಚ್ಚು ಸ್ಥಾನಗಳನ್ನು ಗಳಿಸಿದರೆ, ಜಯಲಲಿತಾ ಅವರು ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ನರಸಿಂಹ ರಾವ್ ಮತ್ತು ನನ್ನ ನಂತರ ದಕ್ಷಿಣ ಭಾರತದ ಮತ್ತೊಬ್ಬರು ಪ್ರಧಾನಿ ಪಟ್ಟಕ್ಕೆ ಏರಬಹುದು ಎಂದರು. ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿಯನ್ನು ಜಯಲಲಿತಾ ಹೊಂದಿದ್ದಾರೆ ಎಂದು ಗೌಡರು ಹೇಳಿದರು.
ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಜನರು ಇಟ್ಟಿದ್ದ ನಂಬಿಕೆಯನ್ನು ಪಕ್ಷ ಉಳಿಸಿಕೊಂಡಿಲ್ಲ ಎಂದು ಗೌಡರು ವಿಶ್ಲೇಷಿಸಿದರು. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಜಯ ಸಾಧಿಸುವ ಮೂಲಕ ಹೊಸ ರಾಜಕೀಯ ಸಂಪ್ರದಾಯವನ್ನು ಹುಟ್ಟುಹಾಕಿದೆ ಎಂದು ಗೌಡರು ಪ್ರಶಂಸಿಸಿದರು.












Click it and Unblock the Notifications