ಚೆನ್ನೈ: ಟ್ರಾಫಿಕ್ ರಾಮಸ್ವಾಮಿ ಸೇರಿ 28 ಅಭ್ಯರ್ಥಿಗಳಿಗೆ ಸೋಲು
ಚೆನ್ನೈ, ಜೂ.30: ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿರೀಕ್ಷೆಯಂತೆ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕಿ ಎನಿಸಿಕೊಂಡಿದ್ದಾರೆ.ಆರ್.ಕೆ.ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸರಿ ಸುಮಾರು 1.6 ಲಕ್ಷ ಮತಗಳನ್ನು ಜಯಾ ಅವರು ಗಳಿಸಿದ್ದಾರೆ.
ಚೆನ್ನೈನ ರಾಣಿ ಮೇರಿ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆ ಕಾರ್ಯ ಇದೀಗ ಮುಕ್ತಾಯವಾಗಿದ್ದು, ಜಯಲಲಿತಾ ಅವರು ತಮ್ಮ ಎದುರಾಳಿಯನ್ನು 1.51 ಲಕ್ಷ ಮತಗಳ ಅಂತರದಿಂದ ಸುಲಭವಾಗಿ ಸೋಲಿಸಿದ್ದಾರೆ.[ಜಯಲಲಿತಾ ಘೋಷಣೆ ಮಾಡಿದ ಆಸ್ತಿ ಎಷ್ಟು ಗೊತ್ತಾ?]
15ನೇ ಸುತ್ತಿನ ಮತಎಣಿಕೆ(ಒಟ್ಟು 17 ಸುತ್ತು) ನಂತರ ಪ್ರತಿಸ್ಪರ್ಧಿ ಸಿಪಿಎಂನ ಅಭ್ಯರ್ಥಿ ಸಿ.ಮಹೇಂದ್ರನ್ ಅವರು ಕೇವಲ 8875 ಮತಗಳನ್ನು ಪಡೆದುಕೊಂಡರು. ಅಂತಿಮವಾಗಿ ಜಯಲಲಿತಾ 1,60,432 ಮತಗಳನ್ನು ಪಡೆದರೆ, ಸಿ ಮಹೇಂದ್ರನ್ 9,710 ಮತಗಳನ್ನು ಪಡೆದರು. ಅರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ 2,45,000 ಮತಗಳಿತ್ತು.

2011ರಿಂದ ಎಲ್ಲಾ ಮಹಾ ಚುನಾವಣೆ, ಉಪ ಚುನಾವಣೆಗಳಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಜಯಭೇರಿ ಬಾರಿಸುತ್ತಾ ಬಂದಿದೆ.. ಫಲಿತಾಂಶ ಪ್ರಕಟಣೆಗೂ ಮುನ್ನವೇ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ['ಮೆಟ್ರೋ ರೈಲು' ಬಿಟ್ಟ ಜಯಾ ]
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕದ ವಿಶೇಷ ಕೋರ್ಟಿನಿಂದ ಜಯಲಲಿತಾ ಅವರು ನಾಲ್ಕು ವರ್ಷ ಜೈಲು ಶಿಕ್ಷೆ ಗುರಿಯಾಗಿದ್ದರು. ಹೀಗಾಗಿ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಂಡಿತ್ತು. ಹೈಕೋರ್ಟ್ ನಿಂದ ಕ್ಲೀನ್‌ಚಿಟ್ ಪಡೆದ ಜಯಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ನಂತರ ಆರ್.ಕೆ.ನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಜೂನ್ 27ರಂದು ಆರ್.ಕೆ. ನಗರ ವಿಧಾನಸಭೆಗೆ ಉಪ ಚುನಾವಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ 28 ಅಭ್ಯರ್ಥಿಗಳು ಕಣದಲ್ಲಿದ್ದರು. 1,000ಕ್ಕೂ ಅಧಿಕ ನೋಟಾ ಮತಗಳು ಇದ್ದದ್ದು ವಿಶೇಷ.












Click it and Unblock the Notifications