ಚೆನ್ನೈನಲ್ಲಿರುವ ಜಯಲಲಿತಾ ಮನೆ ಮೇಲೆ ಐಟಿ ದಾಳಿ
ಚೆನ್ನೈ, ನವೆಂಬರ್ 17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಚೆನ್ನೈನಲ್ಲಿರುವ ಪೋಯೆಸ್ ಗಾರ್ಡನ್ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.
ಜಯಲಲಿತಾ ಸಾವನ್ನಪ್ಪಿದ ಬಳಿಕ ಸರ್ಕಾರದ ಸುಪರ್ದಿಯಲ್ಲಿರುವ ಪೋಯೆಸ್ ನಿವಾಸದ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ಐಟಿ ಅಧಿಕಾರಿಗಳು ಹೈಕೋರ್ಟ್ ಅನುಮತಿ ಪಡೆದು ದಾಳಿ ಮಾಡಿದ್ದಾರೆ. ಇನ್ನು ಜಯಾ ಅವರ ರಾಜಕೀಯ ಕಾರ್ಯದರ್ಶಿ ಪೂನ್ ಗುಂಡ್ರನ್ ಎನ್ನುವರ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ಮುದುವರೆದಿದೆ.

ಸದ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಕುಟುಂಬ ಜಯಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ವಾಸವಿತ್ತು. ದಾಳಿ ವೇಳೆ ಶಶಿಕಲಾ ರೂಮ್‌ನಿಂದ 1 ಲ್ಯಾಪ್ ಟಾಪ್, 1 ಕಂಪ್ಯೂಟರ್ ಹಾಗೂ 4 ಪೆನ್ ಡ್ರೈವ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಕುಟುಂಬಸ್ಥರು ಮತ್ತು ಜಯಾ ಟಿವಿ ಆವರಣದಲ್ಲಿ ಮೊನ್ನೆ ಅಷ್ಟೇ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ ಕಂಡು ಕೇಳರಿಯದ ಪ್ರಮಾಣದ ಆಸ್ತಿ, ನಗದು, ಚಿನ್ನ, ಬೆಲೆಬಾಳುವ ವಸ್ತುಗಳು ಸೇರಿದಂತೆ ಒಟ್ಟು 1,400 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿತ್ತು.












Click it and Unblock the Notifications