• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈ ಮಳೆ: ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರಿ ಕಚೇರಿಗಳಿಗೆ ರಜೆ

|
Google Oneindia Kannada News

ಚೆನ್ನೈ ನವೆಂಬರ್ 8: ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಉದ್ಯೋಗಿಗಳಿಗೆ ಒಂದು ದಿನದ ರಜೆ ಅಥವಾ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಒದಗಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನಲ್ಲಿರುವ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದಾರೆ. ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳನ್ನು ಹೊರತುಪಡಿಸಿ ರಾಜ್ಯವು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಭಾನುವಾರ ತಮಿಳುನಾಡಿನ 38 ಜಿಲ್ಲೆಗಳ ಪೈಕಿ 36 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ. ರಾಜ್ಯದ ರಾಜಧಾನಿ ಚೆನ್ನೈನಲ್ಲಿ 24 ಗಂಟೆಗಳಲ್ಲಿ 134.29 ಮಿಮೀ ಅತಿ ಹೆಚ್ಚು ಮಳೆ ದಾಖಲಾಗಿದೆ. ಇದರಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಚೆನ್ನೈನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ.

ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂದಿನ ಎರಡು ದಿನಗಳ ಕಾಲ ನಾಲ್ಕು ಜಿಲ್ಲೆಗಳ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ. ಪ್ರವಾಹ ಪ್ರದೇಶಗಳಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜೊತೆಗೆ ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಸಲಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರದಂದು ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಉಪನಗರಗಳಲ್ಲಿ ಭಾರೀ ಮಳೆ ಸುರಿದು, ತಮಿಳುನಾಡು ರಾಜಧಾನಿಯಲ್ಲಿ ಭಾರಿ ಪ್ರವಾಹದಂತೆ ನೀರು ಹರೆದಿದೆ.

ಚೆನ್ನೈನ ನುಂಗಂಬಾಕ್ಕಂ ಮತ್ತು ಉಪನಗರದಲ್ಲಿರುವ ಮೀನಂಬಾಕ್ಕಂನಲ್ಲಿನ ವೀಕ್ಷಣಾಲಯಗಳು ಕ್ರಮವಾಗಿ 21.5 ಸೆಂ ಮತ್ತು 11.3 ಸೆಂ.ಮೀ ಮಳೆ ದಾಖಲಾಗಿದೆ. ಭಾನುವಾರ ಬೆಳಿಗ್ಗೆ 8.30 ರ ಹೊತ್ತಿಗೆ ನಗರದಲ್ಲಿ ಸುರಿದ ಮಳೆ 2015 ರ ನಂತರದ ದಾಖಲೆಗೆ ಸಾಕ್ಷಿಯಾಗಿದೆ. IMD ಮುನ್ಸೂಚನೆಯ ಪ್ರಕಾರ ಉತ್ತರ ತಮಿಳುನಾಡು ಮತ್ತು ಪಕ್ಕದ ಕರಾವಳಿ ಪ್ರದೇಶಗಳಲ್ಲಿ 3.1 ಕಿಮೀ ಎತ್ತರದವರೆಗೆ ಬೀಸುವ ಗಾಳಿಯು ಮಳೆಯ ಚಟುವಟಿಕೆಯನ್ನು ಪ್ರಚೋದಿಸುತ್ತಿದೆ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಚೆನ್ನೈ ನಗರ ಮತ್ತು ಮೂರು ನೆರೆಯ ಜಿಲ್ಲೆಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಿದೆ.

ಚೆನ್ನೈ ಸೇರಿದಂತೆ 12 ಜಿಲ್ಲೆಗಳು ಮಳೆಯಿಂದ ಹಾನಿಗೀಡಾಗಿದೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಹೇಳಿದ್ದಾರೆ. ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಎಲ್ಲಾ ಸಚಿವರು ಮತ್ತು ಡಿಎಂಕೆ ಸಂಸದರು ಮತ್ತು ಶಾಸಕರಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಸಂತ್ರಸ್ತರಿಗೆ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತಿದೆ. ಭಾನುವಾರ ಮಧ್ಯಾಹ್ನದವರೆಗೆ 44 ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 50,000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು. ಭಾರೀ ಮಳೆಯಿಂದಾಗಿ ಭಾನುವಾರ ಮಧ್ಯಾಹ್ನದ ವೇಳೆಗೆ ಚೆಂಬರಂಬಾಕ್ಕಂ ಸರೋವರ ಸೇರಿದಂತೆ ನಗರ ಪ್ರದೇಶದ ಮೂರು ಪ್ರಮುಖ ಜಲಾಶಯಗಳಿಂದ ನೀರು ಬಿಡುಗಡೆಯಾಗಿದೆ. ಪೂಂಡಿ ಮತ್ತು ರೆಡ್ ಹಿಲ್ಸ್ ಎರಡು ಜಲಾಶಯಗಳೀಮದ ಭಾನುವಾರ ನೀರನ್ನು ಬಿಡುಗಡೆ ಮಾಡಿದ ನಂತರ ನದಿಯ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಸರ್ಕಾರ ಈಗಾಗಲೇ 150 ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳನ್ನು ಸಿದ್ಧಪಡಿಸಿದೆ. ಮಧುರೈ ಮತ್ತು ಕಡಲೂರಿಗೆ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿದೆ. ಸುಮಾರು 900 ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ತುರ್ತು ಪರಿಸ್ಥಿತಿಗಳಿಗಾಗಿ ಸಿದ್ಧರಾಗಿದ್ದಾರೆ ಎಂದು ಹೇಳಿದರು.

   ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್ ಕೊಟ್ಟಿರೋ ಶ್ರೇಯಸ್ ಅಯ್ಯರ್ ಟಾರ್ಗೆಟ್ ಏನು? | Oneindia Kannada

   ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಭಾನುವಾರದಂದು ಭೇಟಿ ನೀಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಕೊಳತ್ತೂರ್, ಸೈದಾಪೇಟ್, ಪೆರಂಬೂರ್, ಪುರಸೈವಾಲ್ಕಂ, ಕೊಸಪ್ಪೆಟ್ ಮತ್ತು ಒಟ್ಟೇರಿಗಳಿಗೆ ಭೇಟಿ ನೀಡಿ ಶಿಬಿರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಎಂಕೆ ಸ್ಟಾಲಿನ್ ಅವರು ಯಾವುದೇ ಪ್ರದೇಶ ಜಲಾವೃತವಾಗದಂತೆ ನೋಡಿಕೊಳ್ಳಲು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಹಾರ ಶಿಬಿರಗಳಲ್ಲಿ ಕೋವಿಡ್-19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ.

   English summary
   Tamil Nadu Chief Minister MK Stalin has requested private companies in Chennai to grant one-day leave or provide the option to work from home for their employees in view of the heavy rains in the city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X