1 ರುಪಾಯಿ ಬಾಕಿಯೆಂದು 138 ಗ್ರಾಮ್ ಚಿನ್ನಾಭರಣ ನೀಡದ ಬ್ಯಾಂಕ್
ಚೆನ್ನೈ, ಜುಲೈ 2: ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡಿದ್ದ ವ್ಯಕ್ತಿಯೊಬ್ಬರು 1 ರುಪಾಯಿ ಬಾಕಿ ಉಳಿಸಿಕೊಂಡರು ಅನ್ನೋ ಕಾರಣಕ್ಕೆ ಅಡವಿಟ್ಟ 138 ಗ್ರಾಮ್ ಚಿನ್ನಾಭರಣ ಹಿಂತಿರುಗಿಸಲು ನಿರಾಕರಿಸಿದರು ಎಂದು ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಂಚೀಪುರಂ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ನ ಪಲ್ಲವರಂ ಶಾಖೆ ಖಾತೆದಾರರಾದ ಫಿರ್ಯಾದುದಾರ ಸಿ.ಕುಮಾರ್ ಕಳೆದ ಐದು ವರ್ಷದಿಂದ ಕಂಬ ಕಂಬ ಸುತ್ತಿದ್ದಾರೆ. ಮೂರೂವರೆ ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ವಾಪಸ್ ಪಡೆಯಲು, ಬ್ಯಾಂಕ್ ಗೆ ಹಿಂತಿರುಗಿಸಲು ಸೂಚನೆ ನೀಡುವಂತೆ ಕೋರಿ ಮನವಿ ಮಾಡಿದ್ದಾರೆ.
ಅರ್ಜಿದಾರರಾದ ಕುಮಾರ್ ಬ್ಯಾಂಕ್ ನಿಂದ ಮೂರು ಸಾಲ ಖಾತೆ ಮೂಲಕ ( ಮೊದಲ ಸಲ 131 ಗ್ರಾಮ್ ಚಿನ್ನಾಭರಣ, ಆ ನಂತರ ಎರಡು ಬಾರಿಗೆ 7 ಗ್ರಾಮ್) ಒಟ್ಟು ರು. 1.65 ಲಕ್ಷ ಸಾಲ ಪಡೆದಿದ್ದರು. ಮೊದಲು ಪಡೆದಿದ್ದ ಸಾಲ ತೀರಿಸಿದ ಕುಮಾರ್, 131 ಗ್ರಾಮ್ ಆಭರಣ ಹಿಂತಿರುಗಿಸುವಂತೆ, ಬಾಕಿ ಎರಡು ಖಾತೆ ಮೊತ್ತ ನಂತರ ತೀರಿಸುವುದಾಗಿ ಹೇಳಿದ್ದರು.

ಕೆಲ ಕಾಲದ ಬಳಿಕೆ ಉಳಿದ ಎರಡು ಸಾಲದ ಖಾತೆಯ ಮೊತ್ತವನ್ನೂ ಪಾವತಿಸಿದ್ದಾರೆ. ಆದರೆ ಬ್ಯಾಂಕ್ ನವರು ಆಭರಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಮೂರೂ ಸಾಲ ಖಾತೆಯಲ್ಲಿ ತಲಾ ಒಂದು ರುಪಾಯಿ ಬಾಕಿಯಿದೆ, ಆಭರಣ ವಾಪಸ್ ನೀಡಲು ಆಗಲ್ಲ ಎಂದಿದ್ದಾರೆ.
ಅರ್ಜಿದಾರ ಕುಮಾರ್ ಪದೇಪದೇ ಮನವಿ ಮಾಡಿದ ಬಳಿಕವೂ ಅಥವಾ ಆ ಒಂದೊಂದು ರುಪಾಯಿ ಹಿಂತಿರುಗಿಸುವುದಾಗಿ ಹೇಳಿದಾರೂ ಬ್ಯಾಂಕ್ ನವರು ಆಭರಣ ವಾಪಸ್ ಕೊಡಲು ಒಪ್ಪಿಲ್ಲ. ಆ ಹಂತದಲ್ಲಿ ಕುಮಾರ್ ಅವರಿಗೆ ತಮ್ಮ ಆಭರಣದ ಸುರಕ್ಷತೆ ಬಗ್ಗೆಯೇ ಅನುಮಾನ ಮೂಡಿದೆ. ಕುಮಾರ್ ಪರ ವಕೀಲ ಎಂ.ಸತ್ಯನ್ ಮದ್ರಾಸ್ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ಇದೀಗ ಅರ್ಜಿ ಆಲಿಸಿದ ಕೋರ್ಟ್, ಇನ್ನೆರಡು ವಾರದಲ್ಲಿ ಬ್ಯಾಂಕ್ ಅಧಿಕಾರಿಗಳಿಂದ ಉತ್ತರ ಪಡೆಯುವಂತೆ ಸರಕಾರ ಸೂಚನೆ ನೀಡಿದೆ.












Click it and Unblock the Notifications