ತಮಿಳುನಾಡಿನ ಸಂಸದ ಎ ರಾಜಾರಿಗೆ ಪ್ರಚಾರದ ಕಣದಿಂದ 48 ಗಂಟೆ ನಿರ್ಬಂಧ!
ಚೆನ್ನೈ, ಏಪ್ರಿಲ್ 1: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಡಿಎಂಕೆ ಸಂಸದ ಎ ರಾಜಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಂದಿನ 48 ಗಂಟೆಗಳವರೆಗೂ ಡಿಎಂಕೆ ಸಂಸದ ಎ ರಾಜಾ ಪ್ರಚಾರದತ್ತಿ ತೊಡಗುವಂತಿಲ್ಲ ಎಂದು ಆಯೋಗ ಸೂಚನೆ ನೀಡಿದೆ. ಸಿಎಂ ವಿರುದ್ಧ ಅವಾಚ್ಯ ಶಬ್ದವನ್ನು ಬಳಸಿದ ಹಿನ್ನೆಲೆ ಡಿಎಂಕೆ ಸಂಸದನನ್ನು ಪ್ರಚಾರದ ಕಣದಿಂದ ದೂರವಿಡುವಂತೆ ಎಐಎಡಿಎಂಕೆ ಆಯೋಗಕ್ಕೆ ದೂರು ನೀಡಿತ್ತು.
ಎಐಎಡಿಎಂಕೆ ನೀಡಿದ ದೂರು ಪರಿಶೀಲಿಸಿದ ಚುನಾವಣಾ ಆಯೋಗವು "ಡಿಎಂಕೆ ಸಂಸದ ರಾಜಾ ಅವರ ಭಾಷಣವು ಅವಹೇಳನಕಾರಿಯಷ್ಟೇ ಅಲ್ಲದೇ ಅಶ್ಲೀಲ ಮತ್ತು ಮಹಿಳೆಯರು ಹಾಗೂ ಮಾತೃತ್ವದ ಘನತೆಯನ್ನು ಕಡಿಮೆ ಮಾಡುತ್ತದೆ. ಇದು ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ" ಎಂದು ಹೇಳಿದೆ.

ಡಿಎಂಕೆ ಸಂಸದ ಎ ರಾಜಾ ವಿವಾದಾತ್ಮಕ ಹೇಳಿಕೆ:
ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮತ್ತು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನಾಯಕತ್ವದ ನಡುವೆ ಹೋಲಿಕೆ ಸಂದರ್ಭದಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ಸ್ಟಾಲಿನ್ ಅವರ ರಾಜಕೀಯ ಜೀವನವು "ಕಾನೂನುಬದ್ಧವಾಗಿ ಜನಿಸಿದ ಸಂಪೂರ್ಣ ಪ್ರಬುದ್ಧ ಮಗುವಿನಂತಿದೆ ಮತ್ತು "ಇಪಿಎಸ್ ಅವರು ಕಾನೂನು ಬಾಹಿರದಿಂದ ಹುಟ್ಟಿದ ಅಕಾಲಿಕ ಮಗುವಿನಂತೆ' ಎಂದು ಹೋಲಿಕೆ ಮಾಡಿದ್ದರು.
ತಮ್ಮ ಹೇಳಿಕೆ ನಂತರ ಎ ರಾಜಾ ಕ್ಷಮೆಯಾಚನೆ:
ಸಿಎಂ ಪಳನಿಸ್ವಾಮಿ ಮತ್ತು ಅವರ ತಾಯಿ ಬಗ್ಗೆ ಡಿಎಂಕೆ ಸಂಸದ ಎ. ರಾಜಾ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಟೀಕೆಗಳಿಂದಾಗಿ ಸಿಎಂಗೆ ತೀವ್ರ ನೋವುಂಟಾಗಿದೆ ಎಂದು ತಿಳಿದು ಬೇಸರವಾಯಿತು. ನನ್ನ ಟೀಕೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ, "ಎಂದು ಹೇಳಿದ್ದರು.
ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದು ನನ್ನ ಭಾಷಣದ ಮುಖ್ಯ ಉದ್ದೇಶವಾಗಿರಲಿಲ್ಲ. ಬದಲಿಗೆ ಎರಡು ನಾಯಕರ ಜೀವನದ ಬಗ್ಗೆ ಹೋಲಿಕೆ ಮಾಡಿದ್ದೇನೆ ಎಂದು ಡಿಎಂಕೆ ಸಂಸದ ಎ. ರಾಜಾ ಸ್ಪಷ್ಟನೆ ನೀಡಿದ್ದರು.












Click it and Unblock the Notifications