ಚೆನ್ನೈ ಕಟ್ಟಡ ದುರಂತ, ಶವಗಳ ದುರ್ವಾಸನೆ ವ್ಯಾಪಕ
ಚೆನ್ನೈ, ಜು.1: ನಗರದ ಹೊರವಲಯದಲ್ಲಿರುವ ಮೌಲಿವಾಕ್ಕಂನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಟ್ಟಡ ಕುಸಿತದ ಘೋರ ದುರಂತದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅವಶೇಷಗಳಡಿಯಿಂದ ಮಂಗಳವಾರ ಮೂವರನ್ನು ಹೊರಗೆಳೆದು ರಕ್ಷಿಸಲಾಗಿದೆ. ಮೃತ ಕಾರ್ಮಿಕರ ಸಂಖ್ಯೆ ಇಂದು 28ಕ್ಕೇರಿದೆ. ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್‌ಡಿಆರ್‌ಎಫ್) ತಂಡದ ಸದಸ್ಯರೂ ಸೇರಿದಂತೆ ಸುಮಾರು 400 ಮಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಅವಶೇಷಗಳನ್ನು ತೆರವುಗೊಳಿಸಿದಂತೆಲ್ಲ ಮೃತ ದೇಹಗಳು ಸಿಗುತ್ತಿವೆ.
ಕುಸಿದ ಕಟ್ಟಡದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಳೆತ ಶವಗಳಿಂದ ಬರುವ ದುರ್ವಾಸನೆ ತೀವ್ರವಾಗಿ ವ್ಯಾಪಿಸಿದ್ದು, ಜನ ಹತ್ತಿರ ಸುಳಿಯಲೂ ಆಗದಂತಾಗಿದೆ. ಆದರೆ, ರಕ್ಷಣಾ ಸಿಬ್ಬಂದಿ ಮಾತ್ರ ಇದಾವುದನ್ನೂ ಲೆಕ್ಕಿಸದೆ ತನ್ನ ಕಾರ್ಯದಲ್ಲಿ ನಿರತವಾಗಿದೆ.
ನಿಖರ ಮಾಹಿತಿ ಇಲ್ಲ: ಅವಶೇಷಗಳ ಅಡಿಯಲ್ಲಿ ಇನ್ನೂ ಎಷ್ಟು ಜನ ಸಿಲುಕಿದ್ದಾರೆ ಎಂಬ ಬಗ್ಗೆ ಯಾರ ಬಳಿಯೂ ನಿಖರ ಮಾಹಿತಿ ಇಲ್ಲ. ಆದರೆ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ಇನ್ನೂ ಭಾರೀ ಸಂಖ್ಯೆಯಲ್ಲಿ ಸಾವು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೇಳುವುದೇ ನಿಜವಾದರೆ ಕಟ್ಟಡದ ಅವಶೇಷದ ಅಡಿಯಲ್ಲಿ ಇನ್ನೂ ಸುಮಾರು 50ಕ್ಕೂ ಹೆಚ್ಚು ಜನ ಕೆಲಸಗಾರರು ಸಮಾಧಿಯಾಗಿರಬಹುದು ಎನ್ನಲಾಗುತ್ತಿದೆ. ಅವಶೇಷಗಳಡಿಯಿಂದ ಹೊರಬರುತ್ತಿರುವ ದುರ್ವಾಸನೆಯ ಭೀಭತ್ಸತೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೇ ಸಂಭವಿಸಿದೆ ಎಂಬುದು ಮನವರಿಕೆಯಾಗುತ್ತಿದೆ.

ಮುಖ್ಯಮಂತ್ರಿ ಜಯಲಲಿತಾ ಕಿಡಿ
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿ, ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ಬೇಕಾಬಿಟ್ಟಿ ವರ್ತಿಸಿರುವ ಡೆವಲಪರ್ ವಿರುದ್ಧ ಮುಖ್ಯಮಂತ್ರಿ ಜಯಲಲಿತಾ ಕೆಂಡಾಮಂಡಲವಾಗಿದ್ದಾರೆ. ಡೆವಲಪರ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಾಲೀಕರು ಹಾಗೂ ನಾಲ್ವರು ಇಂಜಿನಿಯರ್ ಗಳನ್ನು ಇದುವರೆವಿಗೂ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮೃತರ ಸಂಬಂಧಿಕರ ಆಕ್ರಂದನ
ಮೃತಪಟ್ಟವರು, ಗಾಯಾಳುಗಳು, ನಾಪತ್ತೆಯಾಗಿರುವವರ ಸಂಬಂಧಿಗಳು ನೂರಾರು ಸಂಖ್ಯೆಯಲ್ಲಿ ದುರಂತ ಸ್ಥಳ ಹಾಗೂ ಆಸ್ಪತ್ರೆಗಳಲ್ಲಿ ಜಮಾಯಿಸಿದ್ದು, ಕಳೆದ ಮೂರು ದಿನಗಳಿಂದ ರೋದಿಸುತ್ತಲೇ ಇದ್ದಾರೆ.
ದುಃಖದಿಂದ ನೊಂದವರನ್ನು ನಿಯಂತ್ರಿಸುವುದಕ್ಕೂ ಪೊಲೀಸರು ಪರದಾಡುತ್ತಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನ ಮಂದಿ ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. ಸ್ಥಳೀಯ ಕೂಲಿಗಳು ಹೆಚ್ಚಿನ ಹಣ ಬೇಡಿಕೆ ಇಟ್ಟಿದ್ದರಿಂದ ಪರರಾಜ್ಯದ ಕೂಲಿಗಳನ್ನು ಕರೆತಂದಿರುವ ಸುದ್ದಿ ಬಂದಿದೆ.
ಮಳೆಯಿಂದ ವಿಪರೀತ ಅಡಚಣೆ
ಕಟ್ಟಡ ದುರಂತ ಸಂಭವಿಸಿರುವ ಪ್ರದೇಶದಲ್ಲಿ ಆಗಾಗ ಮಳೆ ಬರುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ವಿಪರೀತ ಅಡಚಣೆಯಾಗುತ್ತದೆ. ಅಷ್ಟೇ ಅಲ್ಲದೆ ಕಟ್ಟಡ ಅವಶೇಷಗಳಲ್ಲಿ ನೀರು ನುಗ್ಗುತ್ತಿರುವುದರಿಂದ ಇನ್ನೂ ಅಪಾಯ ಹೆಚ್ಚುವ ಸಾಧ್ಯತೆಯಿದೆ. ನುಗ್ಗುವ ನೀರಿನಿಂದಾಗಿ ಕೆಸರು ರಾಡಿಯಾಗಿ ಶವಗಳು ಬೇಗನೆ ಕೊಳೆಯುತ್ತಿರುವುದರಿಂದ ದುರ್ವಾಸನೆಯೂ ಹೆಚ್ಚುತ್ತಿದೆ.

ಘೋರ ದುರಂತ, ದಿವ್ಯ ನಿರ್ಲಕ್ಷ್ಯ
ಶನಿವಾರ ರಾತ್ರಿ ಮೌಳಲಿವಾಕ್ಕಂನಲ್ಲಿ 11 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ನೆಲಕ್ಕುರುಳಿದಾಗ ಇದೂ ಕೂಡ ಮಾಮೂಲಿ ಕಟ್ಟಡ ಕುಸಿತ ಪ್ರಕರಣ ಎಂದು ಭಾವಿಸಿದ್ದ ಅಧಿಕಾರಿಗಳು ರಕ್ಷಣಾ ಸಿಬ್ಬಂದಿಗೆ ಮೂರು ದಿನ ಕಳೆಯುವುದರೊಳಗಾಗಿ ಘಟನೆಯ ಭೀಕರತೆಯ ಅರಿವಾಗತೊಡಗಿದೆ.
400ರಿಂದ 500 ಜನ ಸಿಬ್ಬಂದಿಗಳು ಸತತವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದರೂ ಹೆಣಗಳನ್ನು ಹೊರತೆಗೆಯಲು ಆಗುತ್ತಿಲ್ಲ. ಅವಶೇಷಗಳ ಅಡಿಯಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದರ ಖಚಿತ ಮಾಹಿತಿಯೂ ಇಲ್ಲ.
ಘಟನೆಯ ಗಂಭೀರತೆ ಕಣ್ಣಿಗೆ ರಾಚತೊಡಗಿದೆ
ಈ ದುರಂತ ಇತ್ತೀಚಿನ ಎಲ್ಲ ದುರ್ಘಟನೆಗಳಿಗಿಂತ ಘನಘೋರವಾಗಿದ್ದು, ಕನಿಷ್ಠ ಸಾವಿನ ಸಂಖ್ಯೆ ಮೂರಂಕಿ ತಲುಪಬಹುದು ಎಂಬ ಆತಂಕ ಎದುರಾಗಿದೆ.
ಅವಶೇಷಗಳನ್ನು ತೆರವು ಮಾಡಿದಂತೆಲ್ಲ ಘಟನೆಯ ಗಂಭೀರತೆ ಕಣ್ಣಿಗೆ ರಾಚತೊಡಗಿದೆ.
ಸ್ಥಳದಲ್ಲಿ 15-20 ಅಗ್ನಿಶಾಮಕ ಯಂತ್ರಗಳು, 20 ಆಂಬುಲೆನ್ಸ್‌ಗಳು, ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ಹಗಲೂ-ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. PTI Photo by R Senthil Kumar












Click it and Unblock the Notifications