ಲೋಕಸಭೆ ಚುನಾವಣೆ: ಸೀಟು ಹಂಚಿಕೊಂಡ ಎಐಎಡಿಎಂಕೆ-ಪಿಎಂಕೆ
ಚೆನ್ನೈ, ಫೆಬ್ರವರಿ 19: ಹಲವಾರು ಊಹಾಪೊಹಗಳ ಬಳಿಕ ತಮಿಳುನಾಡಿನ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿವೆ.
ಎಐಎಡಿಎಂಕೆ-ಬಿಜೆಪಿ ಜೊತೆ ಮೈತ್ರಿ ಘೋಷಣೆಗೂ ಮುನ್ನವೇ ಈ ಎರಡೂ ಪಕ್ಷಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದವು.
ತಮಿಳುನಾಡಿನ 39 ಮತ್ತು ಪುದುಚೆರಿಯ ಒಂದು ಲೋಕಸಭೆ ಕ್ಷೇತ್ರಗಳಲ್ಲಿ ಪಿಎಂಕೆ ಒಂದು ರಾಜ್ಯಸಭೆ ಮತ್ತು 7 ಲೋಕಸಭೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಐಎಡಿಎಂಕೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ತಿಳಿಸಿದರು. ತಮಿಳುನಾಡಿನ ವಿಧಾನಸಭೆ ಉಪಚುನಾವಣೆಗೂ ಈ ಮೈತ್ರಿ ಇರಲಿದೆ.

ಪಿಎಂಕೆ ಸಂಸ್ಥಾಪಕ ಡಾ. ಎಸ್. ರಾಮದಾಸ್ ಮತ್ತು ಅವರ ಮಗ, ಸಂಸದ ಅನ್ಬುಮಣಿ ರಾಮದಾಸ್, ಹಿರಿಯ ಮುಖಂಡ ಜಿಕೆ ಮಣಿ, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಮೈತ್ರಿ ಒಪ್ಪಂದವನ್ನು ಮಾಡಿಕೊಂಡರು.
ಪಿಎಂಕೆಯನ್ನು ತಮ್ಮತ್ತ ಸೆಳೆದುಕೊಳ್ಳಲು ಕಳೆದ ಒಂದು ತಿಂಗಳಿನಿಂದ ಡಿಎಂಕೆ ಮತ್ತು ಎಐಎಡಿಎಂಎಕೆ ಎರಡೂ ಪಕ್ಷಗಳು ಓಲೈಕೆಯ ಪ್ರಯತ್ನ ನಡೆಸಿದ್ದವು.
ಬಿಜೆಪಿ ಕೂಡ ಎಐಎಡಿಎಂಕೆ ಮೈತ್ರಿಕೂಟವನ್ನು ಸೇರಿಕೊಳ್ಳಲಿದ್ದು, ಅದರ ಜತೆಗೆ ವಿಜಯಕಾಂತ್ ಅವರ ಡಿಎಂಡಿಕೆ ಸಹ ಕೈಜೋಡಿಸಲಿದೆ. ಇದರಿಂದ ತಮಿಳುನಾಡಿನಲ್ಲಿ ಮಹಾಮೈತ್ರಿಕೂಟದಂತೆಯೇ ಅದಕ್ಕೆ ಪ್ರತಿಸ್ಪರ್ಧಿಯಾಗಿ ಬಿಜೆಪಿ-ಎಐಎಡಿಎಂಕೆ-ಪಿಎಂಕೆ-ಡಿಎಂಡಿಕೆಯ ಮತ್ತೊಂದು ಬೃಹತ್ ಮೈತ್ರಿಕೂಟ ರಚನೆಯಾಗಲಿದೆ.












Click it and Unblock the Notifications