ಎಐಎಡಿಎಂಕೆ ಮುಖಂಡನನ್ನು ಡಿಎಂಕೆ ಬೆಂಬಲಿಗರು ಹತ್ಯೆ ಮಾಡಿದ್ರಾ?
ತಿರುವಣ್ಣಾಮಲೈನ ಎಐಎಡಿಎಂಕೆ ಕಾರ್ಯದರ್ಶಿಯನ್ನು ಅರುಣಾಚಲೇಶ್ವರ ದೇವಸ್ಥಾನದ ಬಳಿ ಹತ್ಯೆ ಮಾಡಲಾಗಿದೆ. ಈ ಕೊಲೆಯನ್ನು ಡಿಎಂಕೆ ಬೆಂಬಲಿಗರು ಮಾಡಿದ್ದಾರೆಂದು ಆರೋಪಿಸಲಾಗಿದೆ.
ತಿರುವಣ್ಣಾಮಲೈ, ಫೆಬ್ರವರಿ. 12 : ಎಐಎಡಿಎಂಕೆ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಎಸ್ ಕನಕರಾಜ್(40) ಕೊಲೆಯಾದ ಎಐಎಡಿಎಂಕೆ ಮುಖಂಡ. ಇವರು ತಿರುವಣ್ಣಾಮಲೈ ಘಟಕದ ಪಕ್ಷದ ಕಾರ್ಯದರ್ಶಿಯಾಗಿದ್ದರು. ಈ ಹತ್ಯೆ ಮಾಡಿರುವವರನ್ನು ಡಿಎಂಕೆ ಬೆಂಬಲಿಗರು ಎಂದು ಹೇಳಲಾಗುತ್ತಿದೆ.
ಆರೋಪಿಗಳಾದ ಬಾಬು(28), ರಾಜಾ(35) ಸರವಣನ್(30) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಿರುವಣ್ಣಾಮಲೈ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಆರೋಪಿಗಳಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಪ್ರಕರಣದ ತನಿಖೆ ಮುಂದುವರೆದಿದೆ.
ಬೆಳಗಿನ ವಾಯುವಿಹಾರ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕನಕರಾಜ್ ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.












Click it and Unblock the Notifications