ಪನ್ನೀರ್ ಸೆಲ್ವಂರ ತಮ್ಮನನ್ನು ಉಚ್ಚಾಟಿಸಿದ ಎಐಎಡಿಎಂಕೆ
ಚೆನ್ನೈ, ಡಿಸೆಂಬರ್ 19: ತಮಿಳುನಾಡಿನ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಸೋದರ ಓ ರಾಜ ಅವರನ್ನು ಆಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಉಚ್ಚಾಟನೆ ಮಾಡಿದೆ.
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಬ್ಬರ ಅಂಕಿತವಿರುವ ಆದೇಶ ಪತ್ರವನ್ನು ಪ್ರಕಟಿಸಲಾಗಿದೆ.

ಪಕ್ಷದ ಸಿದ್ಧಾಂತಗಳ ವಿರುದ್ಧ ನಡೆದುಕೊಂಡಿರುವುದು, ಪಕ್ಷದ ಘನತೆಗೆ ಕಳಂಕ ತಂದಿರುವುದು ಮುಂತಾದ ಕಾರಣಗಳನ್ನು ನೀಡಲಾಗಿದೆ. ಓ ರಾಜ ಅವರು ಹಾಲಿನ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಈ ರೀತಿಯ ಆದೇಶ ಬಂದಿದೆ.

ಥೇಣಿ ಜಿಲ್ಲೆಯ ಪೆರಿಯಕುಲಂ ನಗರದ ಮುಖ್ಯಸ್ಥರಾಗಿದ್ದ ರಾಜ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ಆರೋಪವಿದೆ.
ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ ಅವರು ಭೇಟಿ ಮಾಡಿದ್ದರು. ಆದರೆ, ರಾಜ ಅವರನ್ನು ಉಚ್ಚಾಟನೆ ಮಾಡಲು ಇದು ಕಾರಣವಲ್ಲ ಎಂದು ಪಕ್ಷದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮಧುರೈ ಹಾಲು ಒಕ್ಕೂಟಕ್ಕೆ ಅವಿರೋಧವಾಗಿ ಆಯ್ಕೆಯಾದರು. ಆದರೆ, ರಾಜ್ಯ ರಾಜಕೀಯದಲ್ಲಿ ದಿಢೀರ್ ಹೆಸರು ಮಾಡಲು ವಾಮ ಮಾರ್ಗ ಹಿಡಿದ ಕಾರಣ, ಪಕ್ಷದಿಂದ ಉಚ್ಚಾಟಿಸಲಾಗಿದೆ.












Click it and Unblock the Notifications