ಬಡವರಿಗೆ ಉಚಿತವಾಗಿ ಇಡ್ಲಿ ನೀಡುವ 'ರಾಣಿ' ಮಾನವೀಯತೆ!
ಚೆನ್ನೈ, ಸೆಪ್ಟೆಂಬರ್ 15 : ಜಗತ್ತಿನಲ್ಲಿ ಮಾನವೀಯತೆ ಕಡಿಮೆಯಾಗಿಲ್ಲ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ತಮಿಳುನಾಡು 70 ವರ್ಷದ ವೃದ್ಧೆಯೊಬ್ಬರ ಕಾರ್ಯ ಇತರರಿಗೂ ಮಾದರಿಯಾಗಿದೆ.
ತಮಿಳುನಾಡಿನ ರಾಮೇಶ್ವರಂ ಬಳಿಕ ಅಗ್ನಿ ತೀರ್ಥದ ಬಳಿ ರಾಣಿ ಎಂಬ 70 ವರ್ಷದ ವೃದ್ಧೆ ಜೀವನೋಪಾಯಕ್ಕಾಗಿ ಇಡ್ಲಿ ಮಾರಾಟ ಮಾಡುತ್ತಾಳೆ. ರುಚಿ ರುಚಿಯಾದ ಇಡ್ಲಿ ತಿನ್ನಲು ಚಿಕ್ಕ ಹೋಟೆಲ್‌ನಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ.
ಚಿಕ್ಕ ಹೋಟೆಲ್‌ನಲ್ಲಿ ಕಟ್ಟಿಗೆ ಒಲೆಯಲ್ಲಿಯೇ ರಾಣಿ ಈಗಲೂ ಇಡ್ಲಿ ಬೇಯಿಸುತ್ತಾರೆ. ಒಂದು ಪ್ಲೇಟ್ ಬಿಸಿ-ಬಿಸಿ ಇಡ್ಲಿಗೆ 30 ರೂ. ದರವಿದೆ. ರಾಣಿ ನಡೆಸುವ ಚಿಕ್ಕ ಕ್ಯಾಂಟೀನ್‌ನಲ್ಲಿ ಇಡ್ಲಿ, ವಡೆ ಸವಿಯಲು ಹಲವಾರು ಜನರು ಬರುತ್ತಾರೆ.

ಕ್ಯಾಂಟೀನ್‌ಗೆ ಬಡವರು ಬಂದರೆ ಉಚಿತವಾಗಿ ರಾಣಿ ಅವರು ಇಡ್ಲಿ ನೀಡಿ ಅವರ ಹೊಟ್ಟೆ ಹಸಿವು ತಣಿಸುತ್ತಾರೆ. ಎಪ್ಪತ್ತು ವರ್ಷದ ಅವರು ಜೀವನೋಪಾಯಕ್ಕಾಗಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಆದರೆ, ಬಡವರಿಗೆ ಉಚಿತವಾಗಿ ಇಡ್ಲಿ ನೀಡಿ ಮಾನವೀಯತೆ ಮೆರೆಯುತ್ತಾರೆ.
"ನಾವು ಒಂದು ಪ್ಲೇಟ್ ಇಡ್ಲಿಗೆ 30 ರೂ. ನಿಗದಿ ಮಾಡಿದ್ದೇವೆ. ಯಾರ ಬಳಿ ಹಣವಿಲ್ಲವೋ ಅವರ ಬಳಿ ನಾವು ಹಣ ನೀಡುವಂತೆ ಒತ್ತಾಯ ಮಾಡುವುದಿಲ್ಲ" ಎಂದು ರಾಣಿ ಎಎನ್‌ಐ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈಗಲೂ ಕಟ್ಟಿಗೆ ಒಲೆಯಲ್ಲಿ ಇಡ್ಲಿ ಬೇಯಿಸಿತ್ತಾ ಮಾನವೀಯತೆಯನ್ನು ಪಾಲಿಸುತ್ತಿರುವ ರಾಣಿಗೆ ದಾನಿಗಳು ಅಗತ್ಯ ಸಹಾಯ ಮಾಡಲಿ. ವೃದ್ಧೆಗೆ ಗ್ಯಾಸ್ ವ್ಯವಸ್ಥೆಯನ್ನು ಮಾಡಲಿ ಎಂಬುದು ಜನರ ಹಾರೈಕೆಯಾಗಿದೆ.












Click it and Unblock the Notifications