ಇದೆಂಥಾ ಘೋರ: ಲವ್ವರ್ ಭೇಟಿಗೆ ಹೋಗಿದ್ದವನು ಸಿಕ್ಕಿದ್ದು ಮಾತ್ರ ಹೆಣವಾಗಿ!
ಚೆನ್ನೈ, ಮಾರ್ಚ್ 24: ಪ್ರೀತಿ ಮಾಯೆ ಹುಷಾರು.. ಕಣ್ಣೀರ್ ಮಾರೋ ಬಜಾರು.. ದುನಿಯಾ ಚಿತ್ರದ ಈ ಹಾಡಿನ ಸಾಲುಗಳು ಇಂದಿನ ದುನಿಯಾದಲ್ಲಿ ಪ್ರೀತಿಯು ಎಂತೆಂತ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತದೆ ಅನ್ನೋ ಎಚ್ಚರಿಕೆಯನ್ನು ನೀಡುತ್ತದೆ. ಅಂಥದ್ದೇ ಒಂದು ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ತಮಿಳುನಾಡಿನ ತಿರುತ್ತಣಿ ಜಿಲ್ಲೆಯಲ್ಲಿ ತನ್ನ ಗೆಳತಿಯನ್ನು ಭೇಟಿ ಆಗುವುದಕ್ಕೆ ಎಂದು ಮನೆಯಿಂದ ಹೊರಟ 20 ವರ್ಷದ ವಿದ್ಯಾರ್ಥಿಯೊಬ್ಬ ರೈಲ್ವೆ ಹಳಿಯ ಮೇಲೆ ಹೆಣವಾಗಿ ಪತ್ತೆ ಆಗಿದ್ದಾನೆ. ಇಡೀ ಪ್ರಕರಣದ ಸುತ್ತ ಪ್ರೀತಿಯ ಸುಳಿ ಸುತ್ತಿಕೊಂಡಿದೆ.
ರೈಲು ಹಳಿಯ ಮೇಲೆ ಬಿದ್ದ ವಿದ್ಯಾರ್ಥಿಯ ಮೃತದೇಹದಲ್ಲಿ ಕೈ ಕಾಲುಗಳು ಕತ್ತರಿಸಿ ಹೋಗಿವೆ. ಕೈ-ಕಾಲುಗಳನ್ನು ಕತ್ತರಿಸಿಕೊಂಡು ಬಿದ್ದಿರುವ ಸ್ಥಿತಿಯಲ್ಲಿ ಕಂಡು ಬಂದ ವಿದ್ಯಾರ್ಥಿ ಮೃತದೇಹವು ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿ ಎನ್ನುವಂತಿದೆ. ಇದು ಲವ್ವರ್ ಅನ್ನು ನೆಚ್ಚಿಕೊಂಡು ಲಾಕ್ ಆದ ವಿದ್ಯಾರ್ಥಿಯ ಕಥೆ. ಹೇಗಿದೆ ಗೊತ್ತೇ ಪ್ರೀತಿಯ ಗೆಳತಿಯ ಭೇಟಿಗೆ ಹೋದವನು ಹೆಣವಾದ ರೋಚಕತೆ?.

ಮಧ್ಯರಾತ್ರೀಲಿ, ರೈಲ್ವೆ ಹಳಿಯಲ್ಲಿ..!
ಅಂದು ಮಂಗಳವಾರ ಸುಮಾರು ಮಧ್ಯರಾತ್ರಿಯ ಸಮಯ. ಕೈ-ಕಾಲುಗಳನ್ನೇ ಕಳೆದುಕೊಂಡು ಮೃತದೇಹವೊಂದು ತಿರುತ್ತಣಿಯ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆ ಆಗಿತ್ತು. ಆ ಮೃತದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರಿಗೆ ಅದು ಧೋನೇಶ್ವರನ್ ಎಂಬ ವಿದ್ಯಾರ್ಥಿ ಎಂಬುದು ಗೊತ್ತಾಯಿತು. ಸಿಂಗರಾಜಪುರಂ ಕಾಲೋನಿ ನಿವಾಸಿಯಾಗಿದ್ದ ಈ ವಿದ್ಯಾರ್ಥಿಯ ಸಾವಿನ ಕುರಿತು ಪೊಲೀಸರು ಕೇಸ್ ದಾಖಲಿಸಿಕೊಂಡರು. ಆಗ ಖಾಕಿ ಕಣ್ಣಿಗೆ ಬಿದ್ದಿದ್ದೇ ಅದೊಂದು ಲವ್ ಸ್ಟೋರಿ.

ಖಾಸಗಿ ಕಾಲೇಜಿನ ವಿದ್ಯಾರ್ಥಿಗೆ ಸಿಕ್ಕ ಖಾಸಾ ಗೆಳತಿ
ತಮಿಳುನಾಡಿನ ತಿರುತ್ತಣಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಸ್ಯಾನಿಟರಿ ಇನ್ಸ್‌ಪೆಕ್ಟರ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಧೋನೇಶ್ವರನ್ ಹಿಂದೆ ಒಂದು ಪ್ರೇಮ ಕಹಾನಿ ತೆರೆದುಕೊಂಡಿತ್ತು. ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ ಖಾಸಾಖಾಸ್ ಗೆಳತಿಯೊಬ್ಬಳಿದ್ದಳು ಎಂಬುದು ಪೊಲೀಸರ ಗಮನಕ್ಕೆ ಬಂದಿತು. ಮುಸ್ಲಿಂ ಯುವತಿಯೊಂದಿಗಿನ ಪ್ರೀತಿ ಜೀವಕ್ಕೆ ಕುತ್ತು ತಂದಿತಾ ಎನ್ನುವ ಆಂಗಲ್ ಒಂದು ಇಲ್ಲಿ ತೆರೆದುಕೊಂಡಿತು.

ಹಿಂದೂ ಹುಡುಗನೊಂದಿಗಿನ ಪ್ರೀತಿಗೆ ಹೆತ್ತವರ ವಾರ್ನಿಂಗ್!
ಕಾಲೇಜುನಲ್ಲಿ ಓದುತ್ತಿದ್ದ ಸಂದರ್ಭದಲ್ಲಿಯೇ ದೋನೇಶ್ವರನ್ ಮತ್ತು ಮುಸ್ಲಿಂ ಯುವತಿಯ ನಡುವೆ ಸ್ನೇಹ ಬೆಳೆದಿತ್ತು. ನಂತರದಲ್ಲಿ ಅದೇ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಇಬ್ಬರ ಪ್ರೀತಿಗೆ ಜಾತಿಯ ಸರಪಳಿ ಬಿತ್ತು. ಅಂತರ ಕಾಯ್ದುಕೊಳ್ಳುವಂತೆ ಯುವತಿ ಸಂಬಂಧಿಕರು ವಾರ್ನಿಂಗ್ ಕೊಟ್ಟಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಯುವತಿಯನ್ನು ಭೇಟಿ ಮಾಡುವುದಕ್ಕಾಗಿಯೇ ಹೋಗಿದ್ದ ಧೋನೇಶ್ವರನ್ ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಈ ಹಿನ್ನೆಲೆ ಯುವತಿಯ ಕೆಲವು ಸಂಬಂಧಿಕರನ್ನು ಶಂಕೆಯ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಧೋನೇಶ್ವರನ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ?
ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ರೈಲಿನ ಎದುರಿಗೆ ಹಾರಿದ ಘಟನೆಯ ಕುರಿತು ತಮಿಳುನಾಡಿನ ಎಕ್ಸ್ ಪ್ರೆಸ್ ರೈಲಿನ ಚಾಲಕರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅದು 20 ವರ್ಷದ ವಿದ್ಯಾರ್ಥಿ ದೋನೇಶ್ವರನ್ ಅಥವಾ ಬೇರೆ ಯಾರೋ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಅಸಲಿಗೆ ವಿದ್ಯಾರ್ಥಿಯದ್ದು ನಿಜವಾಗಿಯೂ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.












Click it and Unblock the Notifications