ಬಿಜೆಪಿ ಸೇರ್ಪಡೆ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದೇನು?
ಚಂಡೀಗಢ, ಡಿಸೆಂಬರ್ 13: ತಾವು ಬಿಜೆಪಿಗೆ ಸೇರುವ ವದಂತಿಯನ್ನು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಳ್ಳಿ ಹಾಕಿದ್ದಾರೆ.
ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಜನರು ಇಂತಹ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಬಗ್ಗೆ ಹರಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದು, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಜ್ಜಿ ಜೊತೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಬಗ್ಗೆ ಕೂಡ ಇದೇ ರೀತಿಯ ಪ್ರಚಾರ ನಡೆಯುತ್ತಿದೆ. ಈ ವಿಷಯದ ಬಗ್ಗೆ ಯುವಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ
ಈ ನಡುವೆ 2017ರ ವಿಧಾನಸಭೆ ಚುನಾವಣೆ ವೇಳೆಯೂ ಹರ್ಭಜನ್ ಸಿಂಗ್ ಬಗ್ಗೆ ಇದೇ ರೀತಿಯ ಪ್ರಚಾರ ನಡೆದಿತ್ತು. ಆಗ ಭಜ್ಜಿ ಕಾಂಗ್ರೆಸ್ ಪಕ್ಷ ಸೇರುವ ಸುದ್ದಿ ಬಂದಿತ್ತು.
ಮತ್ತೊಂದೆಡೆ, ಹರ್ಭಜನ್ ಶೀಘ್ರದಲ್ಲೇ ಎಲ್ಲಾ ಕ್ರಿಕೆಟ್ ಫಾರ್ಮ್ಯಾಟ್‌ಗಳಿಗೆ ವಿದಾಯ ಹೇಳಿ ಐಪಿಎಲ್‌ನಲ್ಲಿ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.
ಈ ಬಗ್ಗೆ ಮಾತನಾಡಿರುವ ಪಂಜಾಬ್‌ನ ಹಿರಿಯ ಬಿಜೆಪಿ ನಾಯಕರೊಬ್ಬರು, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಹೆಸರು ನಮ್ಮ ಲೀಸ್ಟ್ನಲ್ಲಿದೆ. ಈ ಇಬ್ಬರು ಭಾರತೀಯ ಕ್ರಿಕೆಟಿಗರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 117 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾಹೇಳಿದ್ದಾರೆ. ಆದಾಗ್ಯೂ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಪಕ್ಷವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಅಂತಿಮ ಕ್ಷಣದಲ್ಲಿ ನಿರ್ಧಾರ ಬದಲಾಗಬಹುದು.
2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಬಹುಮತವನ್ನು ಪಡೆದಿತ್ತು. ಈ ಮೂಲಕ 10 ವರ್ಷಗಳ ನಂತರ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿತ್ತು.
ಇನ್ನು 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕೆಲ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ಪಂಜಾಬ್ ಬಿಜೆಪಿ. ಅದರಂತೆ ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ದವಾಗುತ್ತಿದ್ದು, ಆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿರುವುದು ವಿಶೇಷ.
ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಇಬ್ಬರು ಭಾರತೀಯ ಮಾಜಿ ಕ್ರಿಕೆಟಿಗರಿಗೆ ಬಿಜೆಪಿ ಟಿಕೆಟ್ ಆಫರ್ ನೀಡಲಿದೆ. ಇದಾಗ್ಯೂ ಯುವಿ ಹಾಗೂ ಭಜ್ಜಿ ಸ್ಪರ್ಧಿಸಲು ಒಪ್ಪದಿದ್ದರೆ, ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ಮುಂದಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತೀಚೆಗೆಷ್ಟೇ ಹರ್ಭಜನ್ ಸಿಂಗ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದ್ದು, ಇನ್ನೊಂದೆಡೆ ಫೆಬ್ರವರಿಯಲ್ಲಿ ಯುವರಾಜ್ ಸಿಂಗ್ ಹೊಸ ಇನಿಂಗ್ಸ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ಇದೀಗ ಈ ಇಬ್ಬರು ಆಟಗಾರರ ಹೆಸರಿನೊಂದಿಗೆ ಬಿಜೆಪಿ ಪಕ್ಷ ಹೆಸರು ತಳುಕುಹಾಕಿಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರ ಮುಂದಿನ ನಡೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications