'ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ' ಎಂದ ಸಿಧು
ಚಂಡೀಗಢ, ಜನವರಿ 31: ಇನ್ನು ಕೆಲವೇ ವಾರಗಳಲ್ಲಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿದೆ. ಈ ನಡುವೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯುವ ವಿಶ್ವಾಸವನ್ನು ಹೊಂದಿದೆ. ಆದರೆ ಪಕ್ಷದೊಳಗಿನ ಗುಂಪುಗಾರಿಕೆ ಮಾತ್ರ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಪಕ್ಷದೊಳಗಿನ ಗುಂಪುಗಾರಿಕೆಯ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, "ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ," ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಅನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯ," ಎಂದು ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಸದ್ಯಕ್ಕೆ, ಪಂಜಾಬ್ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಳೆದ ವರ್ಷ, ಅಂದಿನ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷವನ್ನು ತೊರೆದಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಜೊತೆಗಿನ ದೀರ್ಘಕಾಲದ ಪೈಪೋಟಿಯ ನಂತರ ತಮ್ಮ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ನವಜೋತ್ ಸಿಂಗ್ ಸಿಧು ಈ ಹೇಳಿಕೆಗೆ ಮಹತ್ವ ಏಕೆ?
ಆ ಬಳಿಕ ಪಕ್ಷವು ಚರಣ್‌ಜೀತ್ ಸಿಂಗ್ ಚನ್ನಿರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಕ ಮಾಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲಾ ಆಂತರಿಕ ಸಮಸ್ಯೆಗಳು ಶಮನವಾಗಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಳಿಕ ಈಗ ನವಜೋತ್ ಸಿಂಗ್ ಸಿಧು, ಈಗಿನ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಜೊತೆ ಶೀತಲ ಸಮರದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಹಾಗೂ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವೆ ಭಿನ್ನಾಭಿಪ್ರಾಯ ಈಗ ಕಾಂಗ್ರೆಸ್‌ನ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಿಂದಾಗಿ ನವಜೋತ್ ಸಿಂಗ್ ಸಿಧು ನೀಡಿದ, "ಕಾಂಗ್ರೆಸ್ ಅನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯ," ಎಂಬ ಹೇಳಿಕೆ ಮಹತ್ವವನ್ನು ಪಡೆದಿದೆ. "ಕಾಂಗ್ರೆಸ್ ಬಲಿಷ್ಠ ಮತ್ತು ಸುಭದ್ರ ಸರಕಾರವನ್ನು ನೀಡಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಹೊಸ ಪಂಜಾಬ್ ಅನ್ನು ರಚಿಸುತ್ತೇವೆ," ಎಂದು ಕೂಡಾ ಈ ವೇಳೆಯೇ ಸಿಧು ದೃಢವಾಗಿ ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ
2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications