ಅಮರೀಂದರ್ ಪಕ್ಷಕ್ಕೆ ಯಾವುದೇ ಕಾಂಗ್ರೆಸ್ ಶಾಸಕರು ಸೇರಲ್ಲ ಎಂದ ಸಿಧು ಪತ್ನಿ
ಅಮೃತಸರ, ಅಕ್ಟೋಬರ್, 26: ಅಮರೀಂದರ್ ಸಿಂಗ್‌ರಿಂದ ಸಹಾಯ ಪಡೆದಿರಬಹುದಾದ ಜನರು ಬಿಟ್ಟು ಬೇರೆ ಯಾವುದೇ ಕಾಂಗ್ರೆಸ್ ಶಾಸಕರು ಕ್ಯಾಪ್ಟನ್ ಅಮರೀಂದರ್ ಸಿಂಗ್‌ರ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ಇತ್ತೀಚಿಗಷ್ಟೇ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ರಚನೆ ಮಾಡುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು, "ಯಾವುದೇ ಕಾಂಗ್ರೆಸ್ ಶಾಸಕರು ಪಕ್ಷವನ್ನು ತೊರೆದು ಅಮರೀಂದರ್ ಸಿಂಗ್‌ರ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಅಮರೀಂದರ್ ಸಿಂಗ್ ಯಾರಿಗಾದರೂ ಸಹಾಯ ಮಾಡಿದ್ದರೆ, ಅವರು ಪಕ್ಷವನ್ನು ತೊರೆದು ಅಮರೀಂದರ್ ಸಿಂಗ್‌ರ ಪಕ್ಷಕ್ಕೆ ಸೇರ್ಪಡೆ ಆಗಬಹುದು," ಎಂದಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿಯ ಹೊಸ ರಾಜಕೀಯ ಪಕ್ಷದ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನವಜೋತ್ ಕೌರ್ ಸಿಧು, "ಪಕ್ಷದೊಂದಿಗೆ ಆಳವಾದ ನಂಟನ್ನು ಹೊಂದಿರುವವರು ಎಂದಿಗೂ ಪಕ್ಷವನ್ನು ತೊರೆದು ಹೋಗುವುದಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.

"ಕಾಂಗ್ರೆಸ್ ತೊರೆದಿದ್ದರು ಕೂಡಾ ಅಮರೀಂದರ್ ಸಿಂಗ್ ಯಾವುದೇ ಕಾರ್ಯಕರ್ತರಿಗೆ ಅಧಿಕಾರವನ್ನು ವಹಿಸಿಕೊಟ್ಟಿಲ್ಲ," ಎಂದು ಅಮರೀಂದರ್ ಸಿಂಗ್‌ರನ್ನು ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ತರಾಟೆಗೆ ತೆಗೆದುಕೊಂಡರು. "ಪಕ್ಷವು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ಗೆ ಎಲ್ಲಾ ಸ್ವಾತಂತ್ಯ್ರವನ್ನು ನೀಡಿತ್ತು, ಆದರೆ ಅಮರೀಂದರ್ ಸಿಂಗ್ ಬೇರೆ ಯಾರಿಗೂ ಅಧಿಕಾರವನ್ನು ನೀಡಿಲ್ಲ. ಬಹಿರಂಗವಾಗಿ ಯಾವುದೇ ಶಾಸಕರಾಗಲಿ ಅಥವಾ ಸಚಿವರನ್ನಾಗಲಿ ಭೇಟಿ ಆಗಿಲ್ಲ. ಹಾಗಿರುವಾಗ ಅಮರೀಂದರ್ ಸಿಂಗ್‌ರನ್ನು ಯಾರು ನಂಬುವವರು," ಎಂದು ಪ್ರಶ್ನೆಯ ಮೂಲಕ ಟೀಕಿಸಿದರು.
ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಂಟಾಗಿ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಆಗಿದ್ದ ಕಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಶಾಸಕರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಆಗಿದ್ದು, ಅವರು ಬಿಜೆಪಿಗೆ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು. ಆದರೆ ಇದು ಬರೀ ರೈತರಿಗೆ ಸಂಬಂಧಿಸಿ ವಿಚಾರದಲ್ಲಿ ಮಾತುಕತೆ ನಡೆಸಲು ಆದ ಭೇಟಿ ಎಂದು ಹೇಳಿ ಅಮರೀಂದರ್ ಸಿಂಗ್ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಹಾಗೆಯೇ ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.
ಹೊಸ ಪಕ್ಷ ರಚನೆ ಮಾಡುತ್ತೇನೆ ಎಂದು ತಿಳಿಸಿದ್ದ ಅಮರೀಂದರ್
ಆ ಬಳಿಕ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ರೈತರ ಸಮಸ್ಯೆ ಬಗೆಹರಿದರೆ, ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪನೆ ಬಗ್ಗೆ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. "ಪಂಜಾಬ್‌ನ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವು ಈಗಲೂ ಮುಂದುವರಿದಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇನೆ" ಎಂದು ಅಮರೀಂದರ್ ಹೇಳಿಕೆಯನ್ನು ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.
ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪಂಜಾಬ್ ಬಿಜೆಪಿ ಉಸ್ತುವಾರಿ ದುಷ್ಯಂತ್ ಗೌತಮ್, ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ರನ್ನು ದೇಶಭಕ್ತ ಎಂದು ಹೊಗಳಿದ್ದಾರೆ. ಹಾಗೆಯೇ, "ಯಾರಿಗೆ ದೇಶದ ಹಿತಾಸಕ್ತಿ ಮುಖ್ಯವೋ ಅವರೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲು ನಮ್ಮ ಪಕ್ಷ ಸಿದ್ಧವಾಗಿದೆ," ಎಂದು ಹೇಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications