ಪಟಿಯಾಲ ಜೈಲಿನಲ್ಲಿ ಸಿಧು ಈಗ ದಿನಗೂಲಿ ನೌಕರ!
ಪಂಜಾಬ್, ಮೇ 26: ಪಟಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕ್ರಿಕೆಟಿಗ, ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೈಲಿನಲ್ಲಿ 'ಮುನ್ಷಿ' ಆಗಿ ಕೆಲಸ ಮಾಡಲಿದ್ದಾರೆ. ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಕ್ಲರಿಕಲ್ ಕೆಲಸ ಮಾಡಲು ಸಿಧು ನಿಯೋಜಿಸಲಾಗಿದೆ.
ಸಿಧು ಮಂಗಳವಾರದಿಂದಲೇ ಕೆಲಸ ಆರಂಭಿಸಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಎರಡು ಪಾಳಿಯಲ್ಲಿ ತಮ್ಮ ಕೆಲಸ ಮಾಡಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಪಾಳಿಗಳ ನಡುವೆ ಸಿಧುಗೆ ಮೂರು ಗಂಟೆಗಳ ವಿರಾಮ ಸಿಗಲಿದೆ.
ಪಟಿಯಾಲಾ ಜೈಲಿನ ನಿಯಮಗಳ ಪ್ರಕಾರ ಸಿಧುಗೆ ವೇತನವಿಲ್ಲದೆ ಮೊದಲ ಮೂರು ತಿಂಗಳು ತರಬೇತಿ ನೀಡಲಾಗುತ್ತದೆ. ನಂತರ ಕೌಶಲ್ಯರಹಿತ, ಅರೆ ಕೌಶಲ್ಯ ಅಥವಾ ನುರಿತ ಖೈದಿ ಎಂದು ವರ್ಗೀಕರಿಸಲಾಗುತ್ತದೆ.
ಈ ವೇಳೆ 30 ರಿಂದ 90 ರೂ. ಗಳಿಸುತ್ತಾರೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಕೆಲಸ ಮಾಡುವ ಸಿಧು ಮೂರು ತಿಂಗಳ ತರಬೇತಿಯ ಅವಧಿಯಲ್ಲಿ ದಿನಕ್ಕೆ 40 ರೂ. ಗಳಿಸುತ್ತಾರೆ ಎಂದು ವರದಿಯಾಗಿದೆ. ಜೈಲಿನ ಅವಧಿ ಮುಗಿದ ಬಳಿಕ ಅದನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ.

ಹಲವು ವೈದ್ಯಕೀಯ ಪರೀಕ್ಷೆಗೆ ಒಳಗಾದ ಸಿಧು
ಸೋಮವಾರ ವೈದ್ಯಕೀಯ ಸಮಿತಿಯು ನವಜೋತ್ ಸಿಂಗ್ ಸಿಧು ಪರೀಕ್ಷಿಸಿದ ನಂತರ ಆರೋಗ್ಯ ಸ್ಥಿತಿಯ ಕಾರಣದಿಂದ ವಿಶೇಷ ಆಹಾರ ನೀಡಲಾಗಿದೆ. ವೈದ್ಯಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಜೈಲಿನಲ್ಲಿ ನೀಡುವ ಸಾಮಾನ್ಯ ಆಹಾರದ ಬದಲಿಗೆ ವಿಶೇಷ ಆಹಾರ ಕ್ರಮವನ್ನು ಹಾಕುವಂತೆ ಸಿಧು ಈ ಹಿಂದೆ ಮನವಿ ಮಾಡಿದ್ದರು. ಅವರ ಕೋರಿಕೆಯ ಮೇರೆಗೆ ಸಿಧುರನ್ನು ಭಾರೀ ಭದ್ರತೆಯಲ್ಲಿ ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಧು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದರು ಎಂದು ಅವರ ವಕೀಲ ಎಚ್‌ಪಿಎಸ್ ವರ್ಮಾ ತಿಳಿಸಿದ್ದಾರೆ.

65 ವರ್ಷ ವಯಸ್ಸಿನ ಗುರ್ನಾಮ್ ಸಿಂಗ್ ಹಲ್ಲೆ ನಡೆಸಿದ್ದ ಸಿಧು
34 ವರ್ಷಗಳ ಹಿಂದಿನ ರಸ್ತೆ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು. 1988ರಲ್ಲಿ ರಸ್ತೆ ಬಿಡುವ ಮಾತಿಗೆ ನಡೆದ ಜಗಳದಲ್ಲಿ ಸಿಧು 65 ವರ್ಷ ವಯಸ್ಸಿನ ಗುರ್ನಾಮ್ ಸಿಂಗ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸಿಧುಗೆ ಗುರುವಾರ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಶರಣಾಗಲು ಕಲಾವಕಾಶ ಕೇಳಿದ್ದ ವಕೀಲರು
ಸಿಧು, ನವತೇಜ್ ಸಿಂಗ್ ಚೀಮಾ ಸೇರಿದಂತೆ ಪಕ್ಷದ ಕೆಲವು ನಾಯಕರೊಂದಿಗೆ ಪಟಿಯಾಲ ನ್ಯಾಯಾಲಯಕ್ಕೆ ತೆರಳಿದ್ದರು. ನ್ಯಾಯಾಂಗ ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಪಟಿಯಾಲದ ಮಟ ಕೌಶಲ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ ನವಜೋತ್ ಸಿಂಗ್ ಸಿಧು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಶರಣಾಗಲು ಕಾಲಾವಕಾಶ ಬೇಕಿದೆ ಎಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಪೀಠ ಪ್ರತ್ಯೇಕ ಅರ್ಜಿ ಸಲ್ಲಿಕೆ
ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾರ ಸಮಯಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್. ರಮಣ ತ್ರಿಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಪೀಠ ಅರ್ಜಿ ಪರಿಶೀಲಿಸಿದ ನಂತರ ಆದೇಶ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಬಳಿಕ ಸಿಧು ಅವರೇ ನ್ಯಾಯಾಲಯಕ್ಕೆ ಶರಣಾಗಿದ್ದರು.












Click it and Unblock the Notifications