ಹರಿಯಾಣ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕಿಸಾನ್ ಮಹಾಪಂಚಾಯತ್
ಚಂಡೀಗಢ, ಫೆಬ್ರವರಿ.07: ಹರಿಯಾಣದ ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಆಘಾತವನ್ನು ನೀಡಬೇಕಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ದರ್ಶನ್ ಪಾಲ್ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣದ ಛರ್ಕಿ-ದಾದ್ರಿಯ ಟೋಲ್ ಪ್ಲಾಜ್ ಬಳಿ "ಕಿಸಾನ್ ಮಹಾ ಪಂಚಾಯತ್" ಸಭೆ ನಡೆಸಲಾಯಿತು. ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ದರ್ಶನ್ ಪಾಲ್, ಬಲ್ಬೀರ್ ಸಿಂಗ್ ರಾಜೇವಾಲ್ ಹಾಗೂ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಸೇರಿದಂತೆ 50,000ಕ್ಕೂ ಅಧಿಕ ಮಂದಿ ರೈತರು ಭಾಗವಹಿಸಿದ್ದರು.
ವಿಶೇಷ ಸಂದರ್ಶನ: ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಯಾದರಾ ಸಚಿವರು?
"ಕಿಸಾನ್ ಮಹಾ ಪಂಚಾಯತ್" ಸಭೆಯನ್ನು ಉದ್ದೇಶಿಸಿ ಮಾತನಾಡಿದ ದರ್ಶನ್ ಪಾಲ್, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಶಾಕ್ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿನ ಸರ್ಕಾರವನ್ನು ಉರುಳಿಸುವ ಅಗತ್ಯವಿದೆ ಎಂದು ಹೇಳಿದರು.
ಹರಿಯಾಣ ಸರ್ಕಾರದ ಮೇಲೆ ಒತ್ತಡ:
ಕೃಷಿ ಕಾಯ್ದೆ ರದ್ದುಗೊಳಿಸುವ ಬಗ್ಗೆ ಹರಿಯಾಣ ಸರ್ಕಾರದ ಮೇಲೆ ಒತ್ತಡವನ್ನು ಹೇರುವ ಅಗತ್ಯವಿದೆ. ರಾಜ್ಯ ಸರ್ಕಾರದ ಮೇಲೆ ರೈತರು ಹೇರುವ ಒತ್ತಡವು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಿರಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲಾ ಹೇಳಿದ್ದಾರೆ. 1947ರಲ್ಲಿ ಬ್ರಿಟಿಷರಿಂದ ಭಾರತವು ರಾಜಕೀಯವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ನಾವು ಆರ್ಥಿಕವಾಗಿ ಇನ್ನೂ ಸ್ವಾತಂತ್ರ್ಯ ಪಡೆದುಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ಅಡಿಯಾಳು ಮಾಡುತ್ತಿವೆ ಎಂದು ದೂಷಿಸಿದ್ದಾರೆ.
ರೈತರ ಬೇಡಿಕೆ ಈಡೇರುವವರೆಗೂ ವಾಪಸ್ ಆಗಲ್ಲ:
ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ರೈತರು ಯಾವುದೇ ಕಾರಣಕ್ಕೂ ಮನೆಗಳಿಗೆ ಹಿಂತಿರುಗುವ ಮಾತಿಲ್ಲ. ಇದು ಸಾರ್ವಜನಿಕರು ಮತ್ತು ರೈತರ ಆಂದೋಲನವಾಗಿದ್ದು, ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವೆಂಬರ್.26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.