ಜೈಲಿನಿಂದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದ ಸಿಧು
ಪಟಿಯಾಲ ಮೇ 23: ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಜೈಲು ಪಲಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುರನ್ನು ಬಿಗಿ ಭದ್ರತೆಯಲ್ಲಿ ಸೋಮವಾರ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.
ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ಸಿಧು, 1988ರ ಡಿ.27ರಂದು ಪಂಜಾಬ್‌ನ ಪಟಿಯಾಲದ ರಸ್ತೆ ರಂಪಾಟದಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದೇ 65 ವರ್ಷದ ಗುರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 34 ವರ್ಷಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 19ರಂದು ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು.
ಮೇ 20ರಂದು ಸಿಧು ಅವರು ಪಟಿಯಾಲ ನ್ಯಾಯಾಲಯಕ್ಕೆ ಶರಣಾದರು. ಅಲ್ಲಿಂದ ಅವರನ್ನು ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

"ಅನಾರೋಗ್ಯದ ಹಿನ್ನಲೆಯಲ್ಲಿ ನವಜೋತ್ ಸಿಂಗ್ ಸಿಧು ತಮಗೆ ಜೈಲಿನಲ್ಲಿ ವಿಶೇಷ ಆಹಾರ ಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವೈದ್ಯರ ತಂಡವು ಸಿಧು ಆರೋಗ್ಯದ ಸಂಪೂರ್ಣ ತಪಾಸಣೆ ನಡೆಸಲಿದೆ'' ಎಂದು ಸಿಧು ಪರ ವಕೀಲ ಎಚ್‌ಪಿಎಸ್ ವರ್ಮಾ ತಿಳಿಸಿದರು.
"ಸಿಧು ಅವರು ಯಾವ ರೀತಿಯ ಆಹಾರ ಸೇವಿಸಿದರೆ ಉತ್ತಮ ಎಂಬುದನ್ನು ವೈದ್ಯರ ತಂಡ ನಿರ್ಧರಿಸಲಿದೆ ಹಾಗೂ ಈ ಸಂಬಂಧ ಪಟಿಯಾಲ ನ್ಯಾಯಾಲಕ್ಕೆ ವರದಿಯನ್ನು ಸಲ್ಲಿಸಲಿದೆ'' ಎಂದರು.
"ಸಿಧು ಅವರು ಗೋಧಿ, ಸಕ್ಕರೆ, ಮೈದಾ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ. ಅವರು ಹಣ್ಣುಗಳು, ಪಪ್ಪಾಯ, ಪೇರಲೆ, ಡಬಲ್ ಟೋನ್ಡ್ ಹಾಲು ಹಾಗೂ ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಗಳು ಹೊಂದಿರದ ಪದಾರ್ಥಗಳನ್ನು ಸೇವಿಸಬಹುದು'' ಎಂದು ವರ್ಮಾ ತಿಳಿಸಿದರು.

ಸಿಧು ಅವರು ಎಂಬಾಲಿಸಮ್ ಹಾಗೂ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. 2015ರಲ್ಲಿ ಅವರು ದೆಹಲಿಯ ಆಸ್ಪತ್ರೆಯಲ್ಲಿ ಅಕ್ಯೂಟ್ ಡೀಪ್ ವೀನ್ ಥ್ರಂಬೋಸಿಸ್(ಡಿವಿಟಿ) ಚಿಕಿತ್ಸೆಗೆ ಒಳಗಾಗಿದ್ದರು.
ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಬೆಂಬಲಿಗರು ಅವರನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ್ದರು.












Click it and Unblock the Notifications