ಕುಮಾರ್ ವಿಶ್ವಾಸ್‌ರಿಗೆ 'ವೈ' ಕೆಟಗರಿ ಭದ್ರತೆ ನೀಡಿದ ಕೇಂದ್ರ ಸರ್ಕಾರ
ಚಂಡೀಗಢ, ಫೆಬ್ರವರಿ 19: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳ(ಖಲಿಸ್ತಾನಿಗಳು) ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದ ಕುಮಾರ್ ವಿಶ್ವಾಸ್ ಅವರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಪಂಜಾಬಿನಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ಅರವಿಂದ್ ಕೇಜ್ರಿವಾಲ್ ಹೇಳಿಕೆಗಳ ನಂತರ ಬೆದರಿಕೆ ಕರೆಗಳ ಬಂದಿರುವ ಹಿನ್ನೆಲೆ ಕುಮಾರ್ ವಿಶ್ವಾಸ್ ರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪಂಜಾಬ್ ವಿಧಾನಸಭೆ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಪ್ ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ ಮಾಡಿರುವ ಆರೋಪ ಸಖತ್ ಸುದ್ದಿ ಆಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ನಾಯಕರು ಕುಮಾರ್ ವಿಶ್ವಾಸ್ ಮಾಡಿರುವ ಆರೋಪವನ್ನೇ ಇಟ್ಟುಕೊಂಡು ಚುನಾವಣಾ ಅಖಾಡದಲ್ಲಿ ಕೇಜ್ರಿವಾಲ್ ವಿರುದ್ಧ ಮುಗಿ ಬೀಳುತ್ತಿದ್ದಾರೆ.

ಖಲಿಸ್ತಾನಿಗಳನ್ನು ವಿರೋಧಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಲ್ಲ:
ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿಗಳನ್ನು ವಿರೋಧಿಸುತ್ತೇನೆ ಎಂದು ಹೇಳುತ್ತಿಲ್ಲ. ಅವರು ಹಾಗೆ ಮಾಡಿದರೆ, ಅವರ ಮೇಲೆ ಹೂಡಿಕೆ ಮಾಡಿದ ಜನರು ಅತೃಪ್ತರಾಗುತ್ತಾರೆ. ನಾನು ಕೋಪದಲ್ಲಿ ಹೇಳಿದ ಮಾತು ಅವರ ಪ್ರತಿಕ್ರಿಯೆ ಸರಿ ಎಂಬುದನ್ನು ಸಾಬೀತುಪಡಿಸುತ್ತಿದೆ. ನಾನು ರಾಜೀನಾಮೆ ನೀಡಲಿಲ್ಲ ಅಥವಾ ನನ್ನನ್ನು ತೆಗೆದುಹಾಕುವ ಸಾಮರ್ಥ್ಯ ಅವರಲ್ಲಿ ಇರಲಿಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.
ವೈ ಕೆಟಗರಿ ಭದ್ರತೆ ಬಗ್ಗೆ ಕುಮಾರ್ ವಿಶ್ವಾಸ್ ಸ್ಪಷ್ಟನೆ:
ನಾನು ವೈ ಕೆಟಗರಿ ಭದ್ರತೆಯನ್ನು ಕೇಳಿರಲಿಲ್ಲ ಅಥವಾ ನನಗೆ ಅದು ಬೇಕಾಗಿಯೂ ಇರಲಿಲ್ಲ. ಭದ್ರತೆ ಕುರಿತು ಅಧಿಕಾರಿಗಳಿಂದ ನನಗೆ ಯಾವುದೇ ಸಂದೇಶ ಬಂದಿಲ್ಲ. ತಮ್ಮ ನಾಗರಿಕರ ಭದ್ರತೆಯ ಬಗ್ಗೆ ಯೋಚಿಸುವುದು ಭದ್ರತಾ ಸಂಸ್ಥೆಗಳು ಮತ್ತು ಸರ್ಕಾರದ ಕೆಲಸವಾಗಿದೆ. ನಾನು ಅರವಿಂದ್ ಕೇಜ್ರಿವಾಲ್ ಜೊತೆ ಮಾತನಾಡುವುದಿಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.
ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪವೇನು?:
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬಿನಲ್ಲಿ ಖಲಿಸ್ತಾನಿಗಳ ಬೆಂಬಲಿಗರಾಗಿದ್ದಾರೆ ಎಂದು ಕುಮಾರ್ ವಿಶ್ವಾಸ್ ಆರೋಪಿಸಿದ್ದರು. "ಒಂದು ದಿನ ನನ್ನ ಬಳಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಅಥವಾ ಸ್ವತಂತ್ರ್ಯ ಖಲಿಸ್ತಾನ್ ರಾಷ್ಟ್ರದ ಮೊದಲ ಪ್ರಧಾನಮಂತ್ರಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಪಂಜಾಬ್ ಎಂಬುದು ಒಂದು ರಾಜ್ಯವಲ್ಲ, ಅದು ಒಂದು ಭಾವನೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದೆ. ಅದಕ್ಕೆ ಅದೆಲ್ಲ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿರುವುದಾಗಿ," ಕುಮಾರ್ ವಿಶ್ವಾಸ್ ಆರೋಪಿಸಿದ್ದರು.
ಖಲಿಸ್ತಾನಿ ಬೆಂಬಲದ ಕುರಿತು ತನಿಖೆಗೆ ಚನ್ನಿ ಒತ್ತಾಯ:
ಕುಮಾರ್ ವಿಶ್ವಾಸ್ ಆರೋಪದ ಕುರಿತು ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮನವಿ ಮಾಡಿಕೊಂಡಿದ್ದಾರೆ. "ಪಂಜಾಬ್ ಸಿಎಂ ಆಗಿ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಡಾ.ಕುಮಾರ್ ವಿಶ್ವಾಸ್ ವೀಡಿಯೊ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ವಿನಂತಿಸುತ್ತೇನೆ. ರಾಜಕೀಯವನ್ನು ಬದಿಗಿಟ್ಟು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್‌ನ ಜನರು ಭಾರಿ ಬೆಲೆ ತೆತ್ತಿದ್ದಾರೆ. ಗೌರವಾನ್ವಿತ ಪ್ರಧಾನಿಯವರು ಪ್ರತಿಯೊಬ್ಬ ಪಂಜಾಬಿಯ ಚಿಂತೆಯನ್ನು ಪರಿಹರಿಸಬೇಕಾಗಿದೆ," ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿಯ ಪತ್ರವನ್ನು ಹಂಚಿಕೊಂಡು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಎಎಪಿ ಮಾಜಿ ನಾಯಕರ ಈ ಹೇಳಿಕೆಯನ್ನು ಪ್ರಚಾರ ಮಾಡದಂತೆ ಮಾಧ್ಯಮಗಳಿಗೆ ಚುನಾವಣಾ ಅಧಿಕಾರಿ ಆದೇಶ ನೀಡಿ, ಬಳಿಕ ಆದೇಶವನ್ನು ಹಿಂಪಡೆದ ಬಳಿಕ ಚನ್ನಿ ಈ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ಪಂಜಾಬಿನಲ್ಲಿ ಒಂದೇ ಹಂತದಲ್ಲಿ ಮತದಾನ:
ಪಂಜಾಬಿನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರ ಭಾನುವಾರ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications