ಯಳಂದೂರು: ಬಿಳಿಗಿರಿರಂಗನ ಬೆಟ್ಟದಲ್ಲಿ ಸಿಗಲಿದೆ ಔಷಧದ ಗುಣವುಳ್ಳ ಕಹಿ ಜೇನು ತುಪ್ಪ
ಚಾಮರಾಜನಗರ, ನವೆಂಬರ್ 19: ಜೇನು ಎಂದರೇ ಅದು ಸಿಹಿಯ ಪರ್ಯಾಯ ಪದವೇ ಆಗಿದೆ. ಆದರೆ ಜೇನು ಸಕ್ಕರೆ, ಬೆಲ್ಲಕ್ಕೆ ಪರ್ಯಾಯವಾಗಿಯೇ ಸೇವಿಸುವುದನ್ನು ನೋಡಿರುತ್ತೀರಿ. ಹಾಗೆಯೇ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೇರಳೆ ಹೂವು ಬಿಡುವ ಕಾಲದಲ್ಲಿ ಕಹಿ ಜೇನು ಸಿಗಲಿದೆ. ಸ್ವಲ್ಪ ಸಿಹಿ-ಹೆಚ್ಚು ತೊಗರಿನ ರುಚಿ ಕೊಡುವ ಜೇನುತುಪ್ಪದ ಸೀಸನ್ ಬಂದಿದ್ದು, ನೂರಾರು ಜನ ಕಹಿ ಜೇನನ್ನೇ ಸವಿಯುತ್ತಿದ್ದಾರೆ.
ಕಹಿ ಜೇನು ತುಪ್ಪಕ್ಕೆ ಹೆಚ್ಚಿದ ಬೇಡಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಜ್ಜೇನು, ತುಡುವೆ, ಕೋಲು, ನೆಸರೆ ಹಾಗೂ ನೇರಳೆ ಎಂಬ 5 ರೀತಿತ ಜೇನು ಸಿಗಲಿದೆ. ನೇರಳೆ ಹೂಗಳಿಂದ ಮಕರಂದ ಹೀರುವ ನೇರಳೆ ಜೇನು ಕಹಿರುಚಿ ಕೊಡುವುದು ಇನ್ನು ವಿಶೇಷವಾಗಿದೆ. ನೇರಳೆ, ಕೋಲು, ನೆಸರೆ ಜೇನು ತುಪ್ಪ ಸಿಗುವುದು ತುಂಬಾ ಕಡಿಮೆ. ಆದ್ದರಿಂದ ಅಡವಿ ನೇರಳೆ ಜೇನಿಗೆ ಬೇಡಿಕೆ ಹೆಚ್ಚಾಗಿದೆ. ಇದರ ತುಪ್ಪ ಸ್ವಲ್ಪ ಸಿಹಿ ಆಗಿದ್ದು, ಹೆಚ್ಚು ಕಹಿ ಇರುತ್ತದೆ. ಈ ನೇರಳೆ ಜೇನು ತುಪ್ಪದಲ್ಲಿ ಔಷಧ ಗುಣಗಳು ಹೆಚ್ಚಾಗಿದ್ದು, ಮಧುಮೇಹಿಗಳು ಇದನ್ನು ಕೊಂಡೊಯ್ತುತ್ತಾರೆ. ನೇರಳೆ ಜೇನು ಸೀಸನ್‌ಗಷ್ಟೇ ಬರಲಿದೆ. ಇದರ ಅಡವಿ ತುಪ್ಪದ ಗುಣಮಟ್ಟವೂ ಚೆನ್ನಾಗಿದೆ ಎಂದು ಸೋಲಿಗ ಸಮುದಾಯದ ಮುಖಂಡ ಡಾ.ಮಹಾದೇವಗೌಡ ಹೇಳಿದರು.

ಕಹಿ ಜೇನು ತುಪ್ಪದ ಬಗ್ಗೆ ಜನರ ಅಭಿಪ್ರಾಯ
"ನಾನು ಇದುವರೆಗೂ ಸಿಹಿ ಜೇನನ್ನಷ್ಟೇ ಸೇವಿಸಿದ್ದೆ, ಬಿಳಿಗಿರಿರಂಗನ ಬೆಟ್ಟಕ್ಕೆ ಬಂದಾಗ ಈ ಕಾಲದಲ್ಲಿ ಕಹಿ ಜೇನು ಸಿಗುವುದು ತಿಳಿದು ತುಂಬಾ ಖುಷಿ ಆಯಿತು. ಇದರ ತುಪ್ಪವನ್ನು ಸವಿಯುವುದೇ ಒಂಥರಾ ಆನಂದ," ಎಂದು ನಿವೃತ್ತ ಶಿಕ್ಷಕ ರಾಜೇಂದ್ರ ಹೇಳಿದರು. ಇನ್ನು ಬಿಳಿಗಿರಿ ಬನ ಒಂದೇ ಬಾರಿ ಸಾವಿರಕ್ಕೂ ಪ್ರಬೇಧದ ಮರ-ಗಿಡಗಳು ಹೂ ಬಿಡುವ ಅದ್ಭುತವಾದ ಪ್ರಕೃತಿಯನ್ನು ಹೊಂದಿದೆ. ಸಿಹಿ ಎಂದರಷ್ಟೇ ಜೇನು ಎನ್ನುವವರಿಗೆ, ಈ ನೇರಳೆ ಜೇನು ಹೊಸ ರುಚಿ ನೀಡಲಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಔಷಧ ಗುಣವುಳ್ಳ ಕಹಿ ಜೇನು ತುಪ್ಪ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜೇನುಗಳನ್ನು ಮುರಿಯುವುದಕ್ಕಾಗಿಯೇ ಹುಡುಗರ ಗುಂಪು ಇರುತ್ತದೆ. ಎಲ್ಲಿ ಜೇನು ಸಿಗುತ್ತದೆಯೋ ಅಲ್ಲಿ ಹುಡುಗರ ಗುಂಪು ಸೇರಿರುತ್ತದೆ. ಹೆಜ್ಜೇನು ಬಿಟ್ಟು ಮಿಕ್ಕಿದ ಎಲ್ಲಾ ರೀತಿಯ ಜೇನುಗಳನ್ನು ಮುರಿಯಲು ಕಾತುರದಿಂದ ಕಾಯುತ್ತಿರುತ್ತಾರೆ. ಪ್ರಮುಖವಾಗಿ ಹಳ್ಳಿಗಾಡಿನ ಅಡವಿಗಳಲ್ಲಿ ಅಂದರೆ ಅರಣ್ಯದಂತಹ ವಾತಾವರಣದಲ್ಲಿ ಜೇನುಗಳು ಹೆಚ್ಚಾಗಿ ಸಿಗುತ್ತವೆ. ನಾನಾ ಬಗೆಯ ಜೇನುಗಳಲ್ಲಿ ಕೋಲು ಜೇನುಗಳು ಹೆಚ್ಚಾಗಿ ಕಂಡುಬರುತ್ತವೆ. ನಗರ ಪ್ರದೇಶಗಳಲ್ಲಿ ಮಾರಾಟ ಮಾಡುವ ಜೇನು ತುಪ್ಪಕ್ಕಿಂತಲೂ, ಹಳ್ಳಿಗಾಡಿನಲ್ಲಿ ಸಿಗುವಂತಹ ಜೇನು ತುಪ್ಪ ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ. ಆದ್ದರಿಂದ ನಗರದ ಜನರು ಕೂಡ ಜೇನು ತುಪ್ಪ ಬೇಕೆಂದರೆ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಹಾಗೆಯೇ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಕಹಿ ಜೇನು ಸಿಗಲಿದ್ದು, ಇದಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಜೇನು ತುಪ್ಪ ಅಂದಮೇಲೆ ಸಿಹಿಯಾಗಿಯೇ ಇರುತ್ತದೆ. ಆದರೆ ಈ ನೇರಳೆ ಜೇನು ತಪ್ಪ ಕಹಿಯಾಗಿದ್ದು, ಇದು ಔಷಧ ಗುಣವನ್ನು ಹೊಂದಿದೆ. ಆದ್ದರಿಂದ ಈ ಜೇನಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಇದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.












Click it and Unblock the Notifications