ಹಲ್ಲುನೋವಿನ ಚಿಕಿತ್ಸೆಯಿಂದ ಅಂಗವೈಕಲ್ಯ: ವೈದ್ಯನಿಗೆ ಭಾರೀ ಮೊತ್ತದ ದಂಡ
ಚಾಮರಾಜನಗರ, ಅಕ್ಟೋಬರ್ 06: ಹಲ್ಲು ನೋವಿಗೆ ಚಿಕಿತ್ಸೆ ಪಡೆದುಕೊಂಡ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.
ಚಿಕಿತ್ಸೆ ಬಳಿಕ ಅಂಗವೈಕಲ್ಯಕ್ಕೆ ಒಳಗಾದ ಮಹಿಳೆ ಚಾಮರಾಜನಗರದ ನಿವಾಸಿಯಾಗಿದ್ದು, ಜಿಲ್ಲಾ ಗ್ರಾಹಕರ ನ್ಯಾಯಲಯವು ಚಾಮರಾಜನಗರದ ಗಿರಿಜಾ ಡೆಂಟಲ್ ಕೇರ್‌ನ ದಂತ ವೈದ್ಯ ಮಂಜುನಾಥ್ ಗೆ 9,24,605 ರೂಗಳನ್ನು ದಂಡದ ರೂಪದಲ್ಲಿ ಪರಿಹಾರ ನೀಡುವಂತೆ ಆಧೇಶ ನೀಡಿದೆ.

ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲದೇ ರೋಗಿಗೆ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ನೇರವಾಗಿ ಇಂಜೆಕ್ಷನ್ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಚಾಮರಾಜನಗರ ಗ್ರಾಹಕರ ನ್ಯಾಯಾಲಯದ ನ್ಯಾ. ಎಂ.ವಿ. ಭಾರತಿ ಹಾಗೂ ಸದಸ್ಯರಾದ ಕೆ.ಎಸ್ ರಾಜು ಅವರಿದ್ದ ಪೀಠ ಈ ಆದೇಶ ನೀಡಿದೆ.
ಮಹಿಳೆಗೆ ವೈದ್ಯಕೀಯ ವೆಚ್ಚ 6,14,605 ರೂಪಾಯಿ ಹಾಗೂ 3 ಲಕ್ಷ ರೂಪಾಯಿ ಪರಿಹಾರ ಮತ್ತು 10 ಸಾವಿರ ದಂಡ ಸೇರಿ 9,24,605 ರೂಪಾಯಿಗಳನ್ನು 30 ದಿನಗಳಲ್ಲಿ ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು..?
ಚಾಮರಾಜನಗರದ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ 2021ರ ಫೆಬ್ರವರಿ 3ರಂದು ನಗರದ ಆಗ್ರಹಾರಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲುನೋವಿನ ಚಿಕಿತ್ಸೆ ಪಡೆಯಲು ಹೋಗಿದ್ದರು. ಆದರೆ, ಡಾ. ಮಂಜುನಾಥ್ ಮುನ್ನಚ್ಚರಿಕೆ ಕ್ರಮ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ಏಕಾಏಕಿ ದವಡೆಗೆ ಅನಸ್ಥೇಷಿಯಾ ನೀಡಿದ ಪರಿಣಾಮ ತೀವ್ರ ನಿತ್ರಾಣಗೊಂಡು ಕುಸಿದುಬಿದ್ದಿದ್ದಾರೆ.
ವೈದ್ಯ ಮಂಜುನಾಥ್ ಹತ್ತಿರದಲ್ಲಿಯೇ ಇದ್ದ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯದೇ ದೂರದ ಮರಿಯಾಲದ ಬಳಿ ಇದ್ದ ಬಸವರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರ ಸೂಚನೆಯಂತೆ ಮೈಸೂರಿನ ನಾರಾಯಣ ಅಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ. ಒಂದು ವಾರಗಳ ಕಾಲ ತುರ್ತು ಚಿಕಿತ್ಸೆ ಘಟಕದಲ್ಲಿ ಚಿಕಿತ್ಸೆಪಡೆದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಜೀವ ಉಳಿಸಿಕೊಂಡಿದ್ದಾರೆ.
ಆದರೆ,ವೈದ್ಯರು ತೋರಿದ ನಿರ್ಲಕ್ಷ್ಯದಿಂದಾಗಿ ಮಹಿಳೆಗೆ ಈ ಗತಿಯಾಗಿದೆ ಎಂದು ಸುಕನ್ಯಾ ಅವರ ಮಗ ರವಿಕುಮಾರ್ ವೈದ್ಯಕೀಯ ಅಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗದ ಕಾರಣ ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.
2022ರ ಮಾರ್ಚ್25 ರಂದು ವೈದ್ಯರ ವಿರುದ್ದ ದಾವೆ ಹೂಡಿದ್ದರು. ನ್ಯಾಯಾಲಯವು ಆರೋಪಿಯಾಗಿದ್ದ ಡಾ.ಮಂಜುನಾಥ್ ಅವರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಜೊತೆಗೆ ವೈದ್ಯಕೀಯ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು.
ಒಂದು ವರ್ಷ ನಾಲ್ಕು ತಿಂಗಳು ಕಾಲ ವಿಚಾರಣೆ ಮಾಡಿ, ಅನೇಕ ತಜ್ಞ ವೈದ್ಯರು ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ವೈದ್ಯ ಡಾ.ಮಂಜುನಾಥ್ ಸೇವಾ ನ್ಯೂನತೆ, ಬೇಜವಾಬ್ದಾರಿಯಿಂದ ಮಹಿಳೆಯು ಶಾಶ್ವತವಾಗಿ ಎಡ ಕೈ ಮತ್ತು ಎಡ ಕಾಲಿನ ಸ್ವಾಧೀನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವೈದ್ಯರಿಂದ 9.24 ಲಕ್ಷ ರೂ.ಗಳ ಪರಿಹಾರವನ್ನು ಕಟ್ಟಿಕೊಡುವಂ ಆದೇಶ ನೀಡಿದ್ದಾರೆ.
ಇನ್ನು, ಕಳೆದ ಆಗಸ್ಟ್ 29ರಂದು 30 ದಿನಗಳ ಒಳಗಾಗಿ ಪರಿಹಾರ ನೀಡುವಂತೆ ಆದೇಶ ನೀಡಿದ್ದು ನಮಗಿನ್ನು ಪರಿಹಾರ ಸಿಕ್ಕಿಲ್ಲ ಎಂದು ಮಹಿಳೆ ಪುತ್ರ ರವಿಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications