ವಿ.ಸೋಮಣ್ಣ ಬಿಜೆಪಿಗೆ ಬರಲು ನಾನೂ ಕೂಡ ಕಾರಣ: ಹೀಗೆ ಹೇಳಿದ್ದು ಯಾರು ಹಾಗೂ ಯಾಕೆ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಜನವರಿ, 23: ತನ್ನ ಸೋಲಿಗೆ ರುದ್ರೇಶ್ ಕಾರಣ ಎಂಬ ಸೋಮಣ್ಣ ಪರೋಕ್ಷ ಆರೋಪಕ್ಕೆ ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ, ವಿಜಯೇಂದ್ರ ಆಪ್ತ ರುದ್ರೇಶ್ ಪ್ರತಿಕ್ರಿಯೆ ಕೊಟ್ಟು ತಾನು ಪಕ್ಷ ವಿರೋಧಿ ಕಾರ್ಯ ಮಾಡಿಲ್ಲ ಎಂದಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿದ ಅವರು, ವಿ.ಸೋಮಣ್ಣ ಕಾಂಗ್ರೆಸ್‌ನಲ್ಲಿದ್ದ ವೇಳೆ ಅವರು ಬಿಜೆಪಿಗೆ ಬರಬೇಕೆಂದು ನಾನು ಸಾಕಷ್ಟು ಬಾರಿ ಮನವಿ ಮಾಡಿಕೊಂಡು, ಅವರನ್ನು ಪಕ್ಷಕ್ಕೆ ಕರೆತರುವ ಅಳಿಲು ಸೇವೆ ಮಾಡಿದ್ದೇನೆ. ಸೋಮಣ್ಣ ಬಿಜೆಪಿಗೆ ಬರಲು ನಾನೂ ಕೂಡ ಕಾರಣ ಎಂದರು.

ಸೋಮಣ್ಣ ಅವರು ದೊಡ್ಡವರು, ನಾನು ನೋಡಿದ ಹಾಗೆ ನನ್ನ ಹೆಸರನ್ನು ಸೋಮಣ್ಣ ಎಲ್ಲೂ ಹೇಳಿಲ್ಲ. ನಾನೇ ಹೋಗಿ ಸೋಮಣ್ಣ ಅವರ ಬಳಿ ಮಾತನಾಡುತ್ತೇನೆ. ನನ್ನಿಂದ ಏನು ತಪ್ಪಾಗಿದೆ ಎಂದು ಕೇಳುತ್ತೇನೆ ಎಂದು ಹೇಳಿದರು. ಇನ್ನು ಸೋಮಣ್ಣನವರ ಸೋಲಿಗೆ ರುದ್ರೇಶ್ ಕಾರಣ ಎಂಬ ವಿಚಾರಕ್ಕೆ ಮಾತನಾಡಿ, ನಾನು ಕಾರಣವಲ್ಲ, ಚುನಾವಣೆ ವೇಳೆ ನಾನು ಬಂದೂ ಇಲ್ಲ. ಕಾರ್ಯಕರ್ತರನ್ನು ಭೇಟಿನೂ ಆಗಿಲ್ಲ, ಏನನ್ನೂ ಹೇಳಿಲ್ಲ ಎಂದರು.
ಒಂದು ವೇಳೆ ನನ್ನನ್ನು ಕರೇದಿದ್ದರೆ, ನಾನು ಬಂದು ಚುನಾವಣೆ ಕೆಲಸ ಮಾಡುತ್ತಿದ್ದೆ. ಹನೂರಿನ ಅಭ್ಯರ್ಥಿ ಕರೆದಿದ್ದಕ್ಕೆ ಅಲ್ಲಿ ಕೆಲ ದಿನ ಪ್ರಚಾರ ಮಾಡಿದ್ದೆ, ಚಾಮರಾಜನಗರಕ್ಕೆ ನಾನು ಬಂದಿಲ್ಲ ಎಂದರು. ಇನ್ನು ನಮ್ಮದು ರಾಷ್ಟ್ರೀಯ ಪಕ್ಷ. ಹಿರಿಯ ನಾಯಕರಿದ್ದಾರೆ ಅವರ ಅಣತಿಯಂತೆ ನಡೆಯಬೇಕು. ಇಷ್ಟು ವರ್ಷದಿಂದ ನಾನು ಪಕ್ಷದ ಪರವಾಗಿ ಓಡಾಡುತ್ತಿದ್ದೇನೆ. ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ, ಸೋಮಣ್ಣ ವಿರುದ್ದವೂ ಮಾತನಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.












Click it and Unblock the Notifications