Weekend Trip: ಹೊಗೆನಕಲ್ ಜಲಪಾತ ಹರಿದುಬಂದ ಪ್ರವಾಸಿಗರ ದಂಡು
Hogenakkal Falls: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಮೂಲಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಉತ್ತಮ ಮಳೆ ಹಾಗೂ ಕಾವೇರಿ ಹೊರಹರಿವಿನ ಪರಿಣಾಮ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದ್ದು, ಕಾವೇರಿ ರುದ್ರ ನರ್ತನ ಕಾಣಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತದಲ್ಲಿ ಕಲ್ಲು ಬಂಡೆಗಳ ನಡುವೆ ನೀರು ಹರಿಯುವ ಜಲ ವೈಯ್ಯಾರ ಕಾಣಲು ಪ್ರವಾಸಿಗರ ದಂಡೇ ಹರಿದುಬಂದಿದ್ದು, ತೆಪ್ಪ ಸವಾರಿ ನಡೆಸಿ ಕಾವೇರಿ ಜಲವೈಭವ ಕಣ್ತುಂಬಿಕೊಂಡರು.

ತಮಿಳುನಾಡು ಮತ್ತು ಕರ್ನಾಟಕ ಎರಡು ಭಾಗದಲ್ಲಿ ಭಾನುವಾರ ಆದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು, ಭೋರ್ಗರೆದು ಹರಿಯುವ ಜಲರಾಶಿ ನಡುವೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿದ್ದು ಕಂಡುಬಂದಿತು. ಕಲ್ಲು ಬಂಡೆಗಳ ಮೇಲೆ ಕುಳಿತ ಪ್ರವಾಸಿಗರು ನೀರಿನ ರಭಸ ಕಂಡು ಬೆರಗಾಗಿದ್ದಾರೆ.
ಇನ್ನು ಅಪಾಯಕಾರಿ ಮಟ್ಟದಲ್ಲಿ ಕಾವೇರಿ ಹರಿಯುತ್ತಿರುವುದರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಕೆಲ ದಿನಗಳಿಂದ ಪ್ರವಾಸಿಗರಿಗೆ ಅವಕಾಶ ನೀಡಿದ ಹಿನ್ನೆಲೆ ವೀಕೆಂಡ್‌ನಲ್ಲಿ ಪ್ರವಾಸಿಗರು ಮಜಾ ಮಾಡುತ್ತಿದ್ದಾರೆ.
ಭರಚುಕ್ಕಿ ಜಲಪಾತೋತ್ಸವ ಆಯೋಜನೆ: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಪಾತ, ಜಲಾಶಯಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಕಾವೇರಿ ಮೈದುಂಬಿ ಹರಿಯುತ್ತಿರುವ ಪರಿಣಾಮ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೈಯ್ಯಾರದಿಂದ ಧುಮ್ಮಿಕ್ಕುತ್ತಿದ್ದು, 10 ವರ್ಷಗಳ ಬಳಿಕ ಜಿಲ್ಲಾಡಳಿತ ಜಲಪಾತೋತ್ಸವ ಆಯೋಜನೆ ಮಾಡಿದೆ.
ಆಗಸ್ಟ್ 10ರಂದು ಸಂಜೆ 6ಕ್ಕೆ ಭರಚುಕ್ಕಿಯಲ್ಲಿ ಜಲಪಾತೋತ್ಸವ ನಡೆಯಲಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಈ ವೇಳೆ ಹಾಜರಿರಲಿದ್ದಾರೆ.
ಶಬ್ಧ-ಬೆಳಕಿನ ಜುಗಲ್ಬಂದಿ: ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕಿನ್ನು ಸಂಯೋಜನೆ ಮಾಡಲಿದ್ದು, ಇದರಿಂದ ಜಲಪಾತ ಮತ್ತಷ್ಟು ಆಕರ್ಷಕ ಆಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದೆ. ಜಾನಪದಗಳ ನಾಡು ಎಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆ ಜಾನಪದ ಸಂಗೀತ ಸುಧೆಯೂ ಇರಲಿದೆ.
ಜಿಲ್ಲಾಡಳಿತದ ವತಿಯಿಂದ 4,000 ಆಸನ ವ್ಯವಸ್ಥೆ ಮಾಡಲಾಗಿದ್ದು, ಪಾರ್ಕಿಂಗ್ ಹಾಗೂ ಸೂಕ್ತ ಬಂದೋಬಸ್ತ್ ಅನ್ನು ಕೂಡ ಮಾಡಲಾಗಿದೆ. ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ, ಎರಡು ದಿನ ಶಬ್ಧ-ಬೆಳಕಿನ ಚಿತ್ತಾರ ಇರಲಿದ್ದು, ಪ್ರವೇಶ ಉಚಿತ ಇರಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.












Click it and Unblock the Notifications