V Somanna: ಸಿಎಂ ಆಗಲು ಏನು ಮಾಡಬೇಕು ಎಂದ ಬಾಲಕ: ವಿ.ಸೋಮಣ್ಣ ನೀಡಿದ ಉತ್ತರ ಇದು!
ಚಾಮರಾಜನಗರ, ಏಪ್ರಿಲ್ 21: ವರುಣಾ ಬಳಿಕ ಚಾಮರಾಜನಗರದಲ್ಲಿ ಎರಡನೇ ಸುತ್ತಿನ ಮತಬೇಟೆ ಆರಂಭಿಸಿರುವ ಸಚಿವ ಸೋಮಣ್ಣ ಚಾಮರಾಜನಗರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಮುಂಜಾನೆಯಿಂದಲೇ ಸೋಮಣ್ಣ ಮತ ಬೇಟೆ ಆರಂಭಿಸಿದ್ದಾರೆ.
ಬೆಳಗಿನ ವಾಕಿಂಗ್‌ನಿಂದಲೇ ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಪ್ರಚಾರ ನಡೆಸುತ್ತಿದ್ದು, ವಾಯುವಿಹಾರಿಗಳು, ಆಟೋ ಚಾಲಕರು, ಟೀ ಅಂಗಡಿಯಲ್ಲಿರುವ ಜನರನ್ನು ಭೇಟಿಯಾಗಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಮತ ಬೇಟೆ ವೇಳೆಸಚಿವ ಸೋಮಣ್ಣ ಬಾಲಕನೋರ್ವನನ್ನು ಭೇಟಿಯಾಗಿದ್ದು, ಇಬ್ಬರೂ ಕುತೂಹಲ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.

ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ಸೋಮಣ್ಣ ಮತಯಾಚನೆ ಮಾಡುತ್ತಿದ್ದ ವೇಳೆ ಎದುರಾದ ಬಾಲಕನೋರ್ವ ರಾಜ್ಯದ ಮುಖ್ಯಮಂತ್ರಿ ಆಗಲು ಏನು ಮಾಡಬೇಕು ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದ್ದಾನೆ. ಬಾಲಕನ ಪ್ರಶ್ನೆಗೆ ಸಮಾಧಾನದಿಂದ ಖುಷಿಯಿಂದ ಉತ್ತರಿಸಿದ್ದಾರೆ.
ನೀನು ಏನು ಮಾಡಬೇಡ. ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲಾ ಲೆಕ್ಕ ಇಲ್ಲ. ನೀನೆ ದೊಡ್ಡ ಸಿಎಂ, ಚೆನ್ನಾಗಿ ಓದು, ಕ್ರೀಡೆಯಲ್ಲಿರು. ಬಾಕಿದೆಲ್ಲಾ ಬಿಟ್ಟುಬಿಡು. ನಿನ್ನ ಹಣೆಯಲ್ಲಿ ಬರೆದಿದ್ದರೆ, ನೀನು ರಾಜಕೀಯಕ್ಕೆ ಬರುತ್ತೀಯಾ ಎಂದು ಸೋಮಣ್ಣ ಬಾಲಕನಿಗೆ ಉತ್ತರಿಸಿದ್ದಾರೆ.
ಇನ್ನು ಇದೇ ವೇಳೆ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದ ಅವ್ಯವಸ್ಥೆ ನೋಡಿ ಸಚಿವ ಸೋಮಣ್ಣ ಬಿಜೆಪಿ ಮುಖಂಡರ ವಿರುದ್ಧ ಗರಂ ಆಗಿದ್ದಾರೆ. ನನಗೆ ಪಕ್ಷ ತಾಯಿ ಸಮಾನ. ಒಂದು ವಿಚಾರಕ್ಕೆ ಅಲ್ಲ. ನೀನೊಬ್ಬ ಬದಲಾವಣೆಯಾಗು. ಬದಲಾಗದಿದ್ದರೆ ನಿಮಗೆ ನಷ್ಟವಾಗುವುದು. ಒಳ್ಳೆಯದಕ್ಕೆ ನಾನು ಪ್ರಾಣ ಕೊಡುತ್ತೇನೆ. ಕೆಟ್ಟವರಿಗೆ ಮಾತ್ರ ಬಿಡುವುದಿಲ್ಲ. ದಯಮಾಡಿ ಕೆಲಸ ಮಾಡಿ ಎಂದಿದ್ದಾರೆ.

ಅಲ್ಲದೇ 10 ವರ್ಷದಿಂದ ಅವರೇನೂ ಮಾಡಿಲ್ಲ. ಆದರೆ ನಮ್ಮ ಸರ್ಕಾರದ ಆಡಳಿತದಲ್ಲಿ ನಾವೇನು ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರವಿದ್ದಾಗಲೂ ಏನು ಕೆಲಸ ಮಾಡಿಲ್ಲ ಎಂದು ಬಿಜೆಪಿ ಮುಖಂಡರಿಗೆ ಸೋಮಣ್ಣ ಚಾಟಿ ಬೀಸಿದರು.
ಇನ್ನು ಚಾಮರಾಜನಗರದಲ್ಲಿ ಎರಡನೇ ದಿನದ ಮತಪ್ರಚಾರ ನಡೆಸುತ್ತಿರುವ ಸಚಿವ ಸೋಮಣ್ಣ ಇಂದು ಕೂಡ 18 ಕ್ಕೂ ಹೆಚ್ಚು ಊರುಗಳಿಗೆ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿಯಾಗಿ ಬಿಜೆಪಿಗೆ ಹಾಗೂ ತಮ್ಮ ಗೆಲುವಿಗೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ.











Click it and Unblock the Notifications