ಕೊರೊನಾ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದ ಇಬ್ಬರ ಬಂಧನ
ಚಾಮರಾಜನಗರ, ಮಾರ್ಚ್ 14: ಮಾರಕ ಕೊರೊನಾ ವೈರಸ್ ಆತಂಕ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಈ ಆತಂಕದ ನಡುವೆ, ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಇಬ್ಬರನ್ನು ಚಾಮರಾಜನಗರ ಪೋಲಿಸರು ಬಂಧಿಸಿದ್ದಾರೆ.
ಸಾಮಾಜಿಕ ತಾಣ ವಾಟ್ಸ್ ಆಪ್ ನಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡಿನ ವ್ಯಕ್ತಿಗಳಿಬ್ಬರಲ್ಲಿ ಕೊರೊನಾ ಸೋಂಕು ತಗುಲಿದೆ ಎಂದು ಈ ಇಬ್ಬರು ಪೋಸ್ಟ್ ಮಾಡಿದ್ದರು.
ಗುಂಡ್ಲುಪೇಟೆಯ ಪುರುಷ ಹಾಗೂ ನಂಜನಗೂಡಿನ ಮಹಿಳೆಯೊಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವಾಟ್ಸ್ ಆಪ್ ಮತ್ತು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡಿತ್ತು. ಈ ವಿಷಯ ಚಾಮರಾಜನಗರ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಕೂಡಲೇ ಪೋಲೀಸ್ ದೂರು ದಾಖಲಿಸುವಂತೆ ಸೂಚನೆ ನೀಡಿದ್ದರು.

ಆರೋಗ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಕ್ಷಿಪ್ರ ಕ್ರಮ ಕೈಗೊಂಡ ಪೊಲೀಸರು ಚಾಮರಾಜನಗರ ತಾಲೂಕಿನ ಕಾವುದವಾಡಿಯ ನಿವಾಸಿ ಲೋಕೇಶ್ ಮತ್ತು ನಂಜನಗೂಡು ಪಟ್ಟಣದ ನೀಲಕಂಠನಗರದ ನಿವಾಸಿ ನಾಗೇಂದ್ರ ಎಂಬಿಬ್ಬರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications